ಟಿ.ಸಿ. ನೀಡಿ ಹೊರಹಾಕಿದ ಸಂತ ಆ್ಯಗ್ನೆಸ್ ಕಾಲೇಜು: ವಿದ್ಯಾರ್ಥಿನಿ ಆರೋಪ

Update: 2019-05-22 14:39 GMT

ಮಂಗಳೂರು, ಮೇ 22: ತರಗತಿಯಲ್ಲಿ ಸ್ಕಾರ್ಫ್ ಧರಿಸುವ ಕಾರಣಕ್ಕೆ ಕಾಲೇಜಿನಿಂದ ವರ್ಗಾವಣೆ ಪ್ರಮಾಣಪತ್ರ (ಟಿ.ಸಿ.) ನೀಡಿ ನನ್ನನ್ನು ಹೊರಹಾಕಲಾಗಿದೆ ಎಂದು ಸಂತ ಆ್ಯಗ್ನೆಸ್ ಕಾಲೇಜಿನ ವಿದ್ಯಾರ್ಥಿನಿ ಫಾತಿಮಾ ಫಝೀಲ ಆರೋಪಿಸಿದ್ದಾರೆ.

ನಗರದ ಸ್ಟೇಟ್‌ಬ್ಯಾಂಕ್‌ನಲ್ಲಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ್ಯಗ್ನೆಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪೂರ್ಣಗೊಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದೇನೆ. ದ್ವಿತೀಯ ಪಿಯುಸಿ ಸೇರ್ಪಡೆಗೆ ಹೋದಾಗ ಸ್ಕಾರ್ಫ್ ಧರಿಸಿ ಬರುತ್ತಿರುವ ನೆಪ ಹೇಳಿ ನನ್ನ ದಾಖಲಾತಿಗೆ ಆಡಳಿತ ಮಂಡಳಿ ನಿರಾಕರಿಸಿದೆ. ಜತೆಗೆ ವರ್ಗಾವಣೆ ಪ್ರಮಾಣಪತ್ರ ನೀಡಿ ಸಂಸ್ಥೆಯಿಂದ ಹೊರಹಾಕಲಾಗಿದೆ ಎಂದು ಆರೋಪಿಸಿದರು.

ಸಾರ್ವಜನಿಕ ವಲಯದಲ್ಲಿ ಸ್ಕಾರ್ಫ್ ವಿವಾದ ಬಹಳಷ್ಟು ಚರ್ಚೆಯಾಗಿದೆ. ಇತ್ತೀಚೆಗೆ ಮುಸ್ಲಿಂ ಮುಖಂಡರು ಹಲವು ಬಾರಿ ಸಂಸ್ಥೆಯ ಮನವೊಲಿಸಲು ಪ್ರಯತ್ನಿಸಿದರೂ ಕಾಲೇಜು ತನ್ನ ನಿಲುವನ್ನು ಬದಲಿಸಿಲ್ಲ. ಪೋಷಕರೊಂದಿಗೆ ನಾನೂ ಸಂಸ್ಥೆಯ ಪ್ರಾಂಶುಪಾಲರನ್ನು ಭೇಟಿ ಮಾಡಿ, ತರಗತಿಯಲ್ಲಿ ಸ್ಕಾರ್ಫ್ ಧರಿಸುವ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಸಂವಿಧಾನ ಪರಚ್ಛೇದ 25-28ರವರೆಗೆ ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರವನ್ನು ಪಾಲಿಸುವ ಹಕ್ಕು ನೀಡಿದೆ. ಅಲ್ಲದೆ, ಪದವಿ ಪೂರ್ವ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಸಮವಸ್ತ್ರ ಅನ್ವಯಿಸುವುದಿಲ್ಲ ಎಂಬ ಸುತ್ತೋಲೆಯನ್ನು ಕೂಡ ಹೊರಡಿಸಿದೆ. ಕಾಲೇಜಿನ ಸ್ಕಾರ್ಫ್ ವಿರುದ್ಧದ ನಿಯಮವು ಸಂವಿಧಾನ ವಿರೋಧಿಯಾಗಿದ್ದು, ಇಲಾಖೆಯ ನಿಯಮವನ್ನು ಕಾಲೇಜು ಗಾಳಿಗೆ ತೂರಿದೆ ಎಂದು ಹೇಳಿದರು.

ಸ್ಕಾರ್ಫ್ ವಿವಾದ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಪರಿಹರಿಸಬೇಕಾದ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಮೌನ ವಹಿಸಿರುವುದನ್ನು ಗಮನಿಸಿದರೆ ಇವರೆಲ್ಲ ಪರೋಕ್ಷವಾಗಿ ಕಾಲೇಜು ಆಡಳಿತ ಮಂಡಳಿ ಪರ ಇದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ ಎಂದು ಫಾತಿಮಾ ಸಂಶಯ ವ್ಯಕ್ತಪಡಿಸಿದರು.

ಕಾಲೇಜಿನ ಇಂತಹ ನಿಲುವು ಸಂಪೂರ್ಣ ಖಂಡನೀಯ. ಮುಂದಿನ ದಿನಗಳಲ್ಲಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ದೂರು ನೀಡಲಾಗುವುದು. ಜಿಲ್ಲಾದ್ಯಂತ ಕಾಲೇಜು ಮಂಡಳಿಯ ಅಸಂವಿಧಾನಿಕ ನಿಯಮ, ಶಿಕ್ಷಣ ಇಲಾಖೆ ಮತ್ತು ಸಚಿವರ ಮೌನವನ್ನು ಖಂಡಿಸಿ ಹೋರಾಟ ನಡೆಸುತ್ತೇನೆ ಎಂದು ವಿದ್ಯಾರ್ಥಿನಿ ಫಾತಿಮಾ ಫಝೀಲ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿನಿ ಫಾತಿಮಾ ಫಝೀಲ ಅವರ ತಾಯಿ ಮುಮ್ತಾಝ್, ಸಹೋದರ ನವಾಲ್ ಉಪಸ್ಥಿತರಿದ್ದರು.

ಹೋರಾಟದ ಎಚ್ಚರಿಕೆ: ಕ್ಯಾಂಪಸ್ ಫ್ರಂಟ್

ಸ್ಕಾರ್ಫ್ ಧರಿಸುವ ಕಾರಣಕ್ಕೆ ಸಂತ ಆ್ಯಗ್ನೆಸ್ ಕಾಲೇಜಿನಿಂದ ವರ್ಗಾವಣೆ ಪ್ರಮಾಣಪತ್ರ ನೀಡಿ ಕಳುಹಿಸಿರುವ ನಿರ್ಧಾರವು ಸಂವಿಧಾನ ವಿರೋಧಿಯಾಗಿದ್ದು, ಈ ಬಗ್ಗೆ ಉಗ್ರ ಹೋರಾಟ ನಡೆಸುವುದಾಗಿ ಕ್ಯಾಂಪಸ್ ಫ್ರಂಟ್‌ ದ.ಕ ಜಿಲ್ಲಾಧ್ಯಕ್ಷ ಮುಹಮ್ಮದ್ ಸಾದಿಕ್ ಎಚ್ಚರಿಸಿದ್ದಾರೆ.

ಟಿ.ಸಿ ನೀಡಿದ ಕ್ರಮವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ, ವಿದ್ಯಾರ್ಥಿಯ ಕಾನೂನು ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ಕಾಲೇಜಿನ ಈ ನಿರ್ಧಾರವನ್ನು ಪ್ರಶ್ನಿಸಿ ಜಿಲ್ಲಾದ್ಯಂತ ವಿದ್ಯಾರ್ಥಿಗಳನ್ನು ಸೇರಿಸಿ ಆ್ಯಗ್ನೆಸ್ ಸಂಸ್ಥೆಯ ವಿರುದ್ಧ ಬೃಹತ್ ಹೋರಾಟವನ್ನು ಸಂಘಟಿಸಲಾಗುವುದು ಎಂದು ಮಹಮ್ಮದ್ ಸಾದಿಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News