​ರಾಜ್ಯ ಸರಕಾರ ದುರ್ಬಲ ಮತ್ತು ಅಸ್ಥಿರ: ಶೋಭಾ

Update: 2019-05-22 15:42 GMT

ಉಡುಪಿ, ಮೇ 22: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರ ದುರ್ಬಲ ಹಾಗೂ ಅಸ್ಥಿರವಾಗಿದೆ. ಈ ಸರಕಾರದ ಬಗ್ಗೆ ರೋಷನ್ ಬೇಗ್‌ನಂತೆ ಹಲವು ಶಾಸಕರಿಗೆ ಅಸಮಧಾನವಿದೆ. ವಿಶ್ವನಾಥ್, ಎಸ್.ಟಿ.ಸೋಮಶೇಖರ್ ರಂಥದವರು ಈಗಾಗಲೇ ತಮ್ಮ ಅಸಮಧಾನ ವನ್ನು ಹೊರಹಾಕಿದ್ದಾರೆ. ರಮೇಶ್ ಜಾರಕಿಹೋಳಿ ಕಾಂಗ್ರೆಸ್‌ನವರ ಕೈಗೆ ಸಿಗುತ್ತಿಲ್ಲ ಎಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. ಸರಕಾರ ಜನಹಿತ ಮರೆತು ಅಧಿಕಾರ ಉಳಿಸಲು ಪ್ರಯತ್ನ ನಡೆಸಿದೆ. ಬರಗಾಲದಿಂದ ಜನರು, ಪ್ರಾಣಿಗಳು ತತ್ತರಿಸಿವೆ. ಸರಕಾರ ಇದ್ದರೂ ಒಂದೇ ಬಿದ್ದರೂ ಒಂದೇ. ಇಷ್ಟೆಲ್ಲ ಗೊಂದಲವಿರುವಾಗ ಸರಕಾರವನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಬಗ್ಗೆ ಸಿಎಂ ಕುಮಾರಸ್ವಾಮಿ ಉತ್ತರ ಕೊಡೇಕು ಎಂದು ಶೋಭಾ ಆಗ್ರಹಿಸಿದರು.

ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲವೂ ಮೋದಿ ಸರಕಾರದ ಪರವಾಗಿವೆ. ಎನ್‌ಡಿಎ 325ರಿಂದ 350 ಸೀಟುಗಳನ್ನು ಗೆಲ್ಲಲಿದೆ. ದೇಶದ ಪ್ರಮುಖ ನಿರ್ಧಾರಗಳಿಗೆ ಮೂರನೇ ಎರಡರಷ್ಟು ಬಹುಮತ ಬೇಕಾಗುತ್ತದೆ. ಈ ಬಾರಿಯ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಈ ಬಹುಮತ ಸಿಗಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಬಿಜೆಪಿ ದೊಡ್ಡ ಅಂತರದಲ್ಲಿ ಗೆಲ್ಲಲಿದೆ. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಬಿಜೆಪಿ ಸಂಸದರು ಕರ್ನಾಟಕದಿಂದ ಆಯ್ಕೆ ಯಾಗಲಿದ್ದಾರೆ. ಕರ್ನಾಟಕದಿಂದ 20ಕ್ಕೂ ಅಧಿಕ ಸಂಸದರು ಮೋದಿ ಕೈ ಬಲ ಪಡಿುತ್ತಾರೆ ಎಂದು ಶೋಭಾ ನುಡಿದರು.

ಕುಣಿಯಲು ಬಾರದವ...:  ಇವಿಎಂ ಹಾಗೂ ವಿವಿಪ್ಯಾಟ್ ಕುರಿತು ಪ್ರತಿಪಕ್ಷಗಳು ಸಂಶಯ ವ್ಯಕ್ತಪಡಿಸುತ್ತಿರುವ ಕುರಿತು ಪ್ರಶ್ನಿಸಿದಾಗ, ಮಧ್ಯ ಪ್ರದೇಶ, ರಾಜಸ್ಥಾನದಲ್ಲಿ ಗೆದ್ದಾಗ ವಿವಿಪ್ಯಾಟ್ ಬಗ್ಗೆ ಸಂಶಯವಿರಲಿಲ್ಲ. ಕುಣಿಯಲು ಬಾರದವ ನೆಲ ಡೊಂಗು ಅಂದನಂತೆ ಎಂಬ ಗಾದೆ ಯಂತಾಗಿದೆ ವಿಪಕ್ಷಗಳ ಆರೋಪ ಎಂದವರು ಲೇವಡಿ ಮಾಡಿದರು. ಚುನಾವಣೆ ಗೆಲ್ಲೋದಕ್ಕೆ ಆಗೋದಿಲ್ಲ ಎಂಬ ಕಾರಣಕ್ಕಾಗಿ ಈ ಸಂಶಯ ವ್ಯಕ್ತಪಡಿಸುತಿದ್ದಾರೆ ಎಂದರು.

ಪ್ರಪಂಚದಲ್ಲೇ ಅತ್ಯಂತ ಉತ್ತಮ ತಾಂತ್ರಿಕ ವ್ಯವಸ್ಥೆ ಇದೆ ಎಂದ ಶೋಭಾ, ಮತಯಂತ್ರದ ಬಳಕೆ ಯುಪಿಎ ಆಡಳಿತ ಕಾಲದಲ್ಲಿ ಆಗಿದೆ. ಎರಡು ಬಾರಿ ಯುಪಿಎ ಅಧಿಕಾರಕ್ಕೆ ಬಂದಾಗ ಆಕ್ಷೇಪಿಸಿಲ್ಲ ಎಂದು ಪ್ರಶ್ನಿಸಿದರು. ಮತಯಂತ್ರ ದುರ್ಬಲವಾಗಿಲ್ಲ, ನೀವು ದುರ್ಬಲರು. ಮಹಾಘಟಬಂಧ ದುರ್ಬಲವಾಗಿದೆ ಎಂದು ಹೇಳಿದರು.

ಶಾಸಕರನ್ನು ಸೆಳೆಯೋಲ್ಲ: ಕಾಂಗ್ರೆಸ್ ಶಾಸಕರನ್ನು ಬಿಜೆಪಿ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವುದಿಲ್ಲ. ಪಕ್ಷ ಬಿಟ್ಟ ನಂತರ ಶಾಸಕರನ್ನು ಬಿಜೆಪಿ ಮಾತನಾಡಿಸುತ್ತದೆ. ಬಿಜೆಪಿ ಒಂದು ದೊಡ್ಡ ಸಮುದ್ರವಿದ್ದಂತೆ, ಯಾರು ಬೇಕಾದ್ರೂ ಬಿೆಪಿಗೆ ಬರಬಹುದು ಎಂದು ನುಡಿದರು.

ಮುಖ್ಯಮಂತ್ರಿಗಳ ದೇವಸ್ಥಾನ ಯಾತ್ರೆ ಕುರಿತಂತೆ ಪ್ರಶ್ನಿಸಿದಾಗ, ಜನಸೇವೆಯೇ ಜನಾರ್ದನನ ಸೇವೆ ಅಂತ ಹಿರಿಯರು ಹೇಳಿದ್ದಾರೆ. ನಾಡಿನ ದೊರೆಯಾದವ ಇದನ್ನು ಪಾಲಿಸಬೇಕು. ಆದರೆ ಕುಮಾರಸ್ವಾಮಿ ಅವರು ಜನತಾ ಸೇವೆ ಬಿಟ್ಟು ಬಿಟ್ಟಿದ್ದಾರೆ. ಜನಾರ್ದನ ದೇವರು ಕೈ ಹಿಡಿಯ ಬಹುದು ಎಂಬುದು ಅವರ ನಂಬಿಕೆ ಇರಬಹುದು. ಕರ್ತವ್ಯ ನಿಭಾಯಿಸದವನನ್ನು ದೇವರೂ ಕೈ ಹಿಡಿಯಲ್ಲ. ಇದನ್ನು ಅರಿತು ಕೆಲಸ ಮಾಡಿದ್ರೆ ಅವರಿಗೆ ಒಳ್ಳೆಯದಾಗಬಹುದು ಎಂದು ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News