ಫೇಸ್‍ಬುಕ್‍ನಲ್ಲಿ ದಲಿತರನ್ನು ನಿಂದಿಸಿ ಅಪಮಾನ: ಕಾನೂನು ಕ್ರಮಕ್ಕೆ ದಲಿತ ಮುಖಂಡರ ಆಗ್ರಹ

Update: 2019-05-22 15:51 GMT

ಪುತ್ತೂರು: ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್‍ನಲ್ಲಿ ದಲಿತ ಸಮುದಾಯವನ್ನು ನಿಂದಿಸಿ ಅವಮಾನಿಸಿ ಜೀವ ಬೆದರಿಕೆಯೊಡ್ಡಿರುವ ವ್ಯಕ್ತಿಯನ್ನು ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಬಂಧಿಸುವಂತೆ ಆಗ್ರಹಿಸಿ ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಬಳಿಕ ಸಂಪ್ಯ ಠಾಣೆ ಎದುರು ಪ್ರತಿಭಟನೆಗೆ ತೆರಳಿದ ಮತ್ತು ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಠಾಣಾಧಿಕಾರಿ ಭರವಸೆ ನೀಡಿದ ಹಿನ್ನಲೆಯಲ್ಲಿ  ಪ್ರತಿಭಟನೆಯನ್ನು ಹಿಂದಕ್ಕೆ ಪಡೆದ ಘಟನೆ ಬುಧವಾರ ನಡೆದಿದೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಆನಂದ್ ಬೆಳ್ಳಾರೆ ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅರಿಯಡ್ಕ ಗ್ರಾಮದ ದಿ.ಜಗನ್ನಾಥ ರೈ ಅವರ ಪುತ್ರ ಸಂದೇಶ್ ಕುಮಾರ್ ಶೆಟ್ಟಿ ಎಂಬವರು ಫೇಸ್‍ಬುಕ್‍ನಲ್ಲಿ ದಲಿತ ಸಮುದಾಯವನ್ನು ಅವಮಾನಿಸಿ ಮತ್ತು ನಿಂದಿಸಿ ಆದಿದ್ರಾವಿಡ ಸಮುದಾಯವನ್ನು ಜಾತಿಯ ಹೆಸರಿನಲ್ಲಿ ಅಪಮಾನಿಸಿದ್ದಾರೆ ಎಂದು ಆರೋಪಿಸಿದರು.

ಈ ವಿಚಾರಕ್ಕೆ ಸಂಬಂಧಿಸಿ ಆರೋಪಿ ಸಂದೇಶ್ ಅವರ ವಿರುದ್ಧ ಜಾತಿ ನಿಂದನೆ ಮತ್ತು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ಕೂಡಲೇ ಬಂಧಿಸುವಂತೆ ಆಗ್ರಹಿಸುವ ಸಲುವಾಗಿ ಸಂಪ್ಯ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದ್ದರು. 

ಸುದ್ದಿಗೋಷ್ಠಿ ಮುಗಿಸಿದ ಬಳಿಕ ಸಂಘಟನೆಯ ತಾಲೂಕು ಸಮಿತಿ ಸಂಚಾಲಕ ದಿನೇಶ್ ವೀರಮಂಗಲ, ಅರಿಯಡ್ಕ ಗ್ರಾಮ ಸಮಿತಿ ಸಂಚಾಲಕ ನಾರಾಯಣ್ ಎಸ್, ಗ್ರಾಮ ಪಂಚಾಯಿತಿ ಸದಸ್ಯ ಸುಂದರ ಎಸ್, ತಾಲ್ಲೂಕು ಸಮಿತಿ ಸಂಘಟನಾ ಸಂಚಾಲಕ ಶೇಷಪ್ಪ ಪುರ್ಪುಂಜ, ಕಾರ್ಯದರ್ಶಿ ಪ್ರತೀಕ್, ಸದಸ್ಯರಾದ ಲೊಕೇಶ್ ಎನ್, ಹರೀಶ್ ಸೇರಿದಂತೆ ಹಲವರು ಸಂಪ್ಯ ಠಾಣೆಗೆ ತೆರಳಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು.

ಆರೋಪಿ ಸಂದೇಶ್ ಅವರ ವಿರುದ್ದ ಈಗಾಗಲೇ ನಾವು ದೂರು ನೀಡಿದ್ದೇವೆ. ಅದರಂತೆ ಆತನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆತನ ವಿರುದ್ದ ಸೆಕ್ಷನ್ 504, 506 ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಂದನೆ ಸಂದೇಶ ರವಾನಿಸಲಾದ ಫೇಸ್‍ಬುಕ್ ಅಕೌಂಟ್ ಸಂದೇಶ್ ಅವರಿಗೆ ಸಂಬಂಧಿಸಿದ್ದಾಗಿದೆಯೋ ಎಂಬ ಕುರಿತು ಸೈಬರ್ ಕ್ರೈಮ್ ತನಿಖೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ 2 ದಿನಗಳ ಕಾಲಾವಕಾಶವನ್ನು ಠಾಣಾಧಿಕಾರಿಗಳು ಕೇಳಿಕೊಂಡಿದ್ದಾರೆ. ಎರಡು ದಿನದ ಬಳಿಕವೂ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಆನಂದ್ ಬೆಳ್ಳಾರೆ ಅವರು ಠಾಣೆಯ ಮುಂದೆ ಸುದ್ದಿಗಾರರಿಗೆ ತಿಳಿಸಿದರು.

ತಿಂಗಳ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇರ್ಲದಲ್ಲಿ ಆಟೋ ರಿಕ್ಷಾ ಮತ್ತು ಕಾರು ನಡುವೆ ಸಣ್ಣಮಟ್ಟಿನ ಅಪಘಾತ ಸಂಭವಿಸಿತ್ತು. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಸಂದೇಶ್ ಶೆಟ್ಟಿ ಅವರು ಆಟೋ ರಿಕ್ಷಾ ಚಾಲಕ ಶಿವರಾಜ್ ಎಂಬವರಿಗೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯನ್ನು ಕಾರು ಚಾಲಕ ಬ್ರಿಜೇಸ್ ಮತ್ತು ಆಟೋ ರಿಕ್ಷಾ ಚಾಲಕ ಶಿವರಾಜ್ ಅವರ ಸಮ್ಮುಖದಲ್ಲಿ ರಾಜಿಯಲ್ಲಿ  ಇತ್ಯರ್ಥಗೊಳಿಸಲಾಗಿತ್ತು. ಅದಾದ ಬಳಿಕ ಅದನ್ನೆ ನೆಪವಾಗಿಟ್ಟುಕೊಂಡು ಸಂದೇಶ್ ಶೆಟ್ಟಿ ಅವರು ಫೇಸ್‍ಬುಕ್‍ನಲ್ಲಿ ದಲಿತರನ್ನು ನಿಂಧಿಸುತ್ತಿದ್ದಾರೆ ಎಂದು ಆನಂದ್ ಬೆಳ್ಳಾರೆ ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News