ರೇಷನಿಂಗ್: ಮೂರು ದಿನದಿಂದ ನೀರಿನ ಪಂಪಿಂಗ್ ಸ್ಥಗಿತ

Update: 2019-05-22 15:55 GMT

ಮಂಗಳೂರು, ಮೇ 22: ತುಂಬೆಯಲ್ಲಿ ನೀರಿನ ರೇಷನಿಂಗ್ ಹಿನ್ನೆಲೆಯಲ್ಲಿ ನಗರಕ್ಕೆ ನೀರಿನ ಪಂಪಿಂಗ್ ಸ್ಥಗಿತಗೊಂಡಿದ್ದು, ಮೂರನೇ ದಿನವಾದ ಬುಧವಾರ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗಿದೆ.

ರೇಷನಿಂಗ್ ಕಾರಣಕ್ಕೆ ಹೆಚ್ಚಿನವರು ಮೊದಲೇ ಟ್ಯಾಂಕ್‌ಗಳಲ್ಲಿ ನೀರು ಸಂಗ್ರಹಿಸಿಟ್ಟಿದ್ದರು. ಆದರೆ ಮೂರನೇ ದಿನಕ್ಕೆ ನೀರೆಲ್ಲ ಖಾಲಿಯಾಗುತ್ತಾ ಬಂದಿದೆ. ಗುರುವಾರವೂ ನೀರು ಪೂರೈಕೆ ಇಲ್ಲದಿರುವುದರಿಂದ ಪಾಲಿಕೆಯ ನಿಯೋಜಿತ ಅಧಿಕಾರಿಗಳಿಗೆ, ನೀರು ಸರಬರಾಜು ಸಹಾಯವಾಣಿಗೆ ಬರುವ ಕರೆಗಳು ಹೆಚ್ಚಾಗಿವೆ. ಮೊದಲ ಬಾರಿಗೆ ನಾಲ್ಕು ದಿನ ನೀರು ಪೂರೈಕೆ ಸ್ಥಗಿತಗೊಳಿಸಿದ್ದರಿಂದ ನೀರಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ವಿಶೇಷವಾಗಿ ವಸತಿ ಸಮುಚ್ಚಯಗಳಿಂದ ಟ್ಯಾಂಕರ್ ನೀರು ಒದಗಿಸುವ ಬೇಡಿಕೆ ಬರುತ್ತಿದೆ. ಆದರೆ ಬುಧವಾರ ಯಾವುದೇ ವಸತಿ ಸಮುಚ್ಚಯ ಗಳಿಗೆ ನೀರು ಒದಗಿಸಿಲ್ಲ. ಖಾಸಗಿ ಟ್ಯಾಂಕರ್‌ಗಳೂ ಬೇಡಿಕೆಗೆ ತಕ್ಕಂತೆ ನೀರು ಪೂರೈಸದಿರುವುದರಿಂದ ಸಮಸ್ಯೆ ಹೆಚ್ಚಾಗಿದೆ.

ಕೆಎಂಎಫ್ ಟ್ಯಾಂಕರ್ ಬಂದಿಲ್ಲ:

ನೀರು ಪೂರೈಕೆಗೆ ಪಾಲಿಕೆ ಬೇಡಿಕೆ ಇಟ್ಟಿದ್ದ ಕೆಎಂಎಫ್ ಟ್ಯಾಂಕರ್ ಇನ್ನೂ ಸಿಕ್ಕಿಲ್ಲ. ಪ್ರಸ್ತುತ 6 ಟ್ಯಾಂಕರ್ ಹಾಗೂ 5 ಸಾವಿರ ಲೀ., 3 ಸಾವಿರ ಲೀ., ಹಾಗೂ 2 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್‌ಗಳನ್ನಿಟ್ಟು 12ಪಿಕಪ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.

3.40ಮೀ.ತಲುಪಿದ ನೀರಿನ ಮಟ್ಟ: ತುಂಬೆಯಲ್ಲಿ ಬುಧವಾರ ಬೆಳಗ್ಗೆ 3.41ಮೀ.ನಷ್ಟಿದ್ದ ನೀರಿನ ಮಟ್ಟ ಸಂಜೆ ವೇಳೆಗೆ 3.40 ಮೀ. ತಲುಪಿದೆ. ಪಂಪಿಂಗ್ ಮಾಡದಿದ್ದರೂ ನೀರು ಆವಿಯಾಗುತ್ತದೆ. ದಿನಕ್ಕೆ 1 ಸೆಂ.ಮೀ.ವರೆಗೆ ಆವಿಯಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News