ಮೇ 22ರಿಂದ ಶ್ರೀನಿವಾಸ ಆಸ್ಪತ್ರೆಯಲ್ಲಿ ಮಹಿಳಾ ಆರೋಗ್ಯ ಅಭಿಯಾನ

Update: 2019-05-22 16:06 GMT

ಮಂಗಳೂರು: ವಿಶ್ವ ಮಹಿಳಾ ದಿನಾಚರಣೆಯ ಶುಭ ಸಂದರ್ಭದಲ್ಲಿ ಮುಕ್ಕಾದಲ್ಲಿರುವ ಶ್ರೀನಿವಾಸ ಆಸ್ಪತ್ರೆಯಲ್ಲಿ ಹಿರಿಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಜಮೀಲಾ ಸಿ. (ಎಂಡಿ, ಒಬಿಜಿ)ರವರ ವೈದ್ಯಕೀಯ ಸೇವೆ ಲಭ್ಯವಾಗುತ್ತಿದೆ.

ಡಾ. ಜಮೀಲಾರ ಸೇವೆ ಮತ್ತು ಸಲಹೆಯನ್ನು ಪಡೆಯಲು ಶ್ರೀನಿವಾಸ ಆಸ್ಪತ್ರೆಯಲ್ಲಿ ಮೇ 22ರಿಂದ ಜೂ. 21ರ ತನಕ ಒಂದು ತಿಂಗಳ ಕಾಲ ಮಹಿಳಾ ಆರೋಗ್ಯ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಆಸ್ಪತ್ರೆ ಹಾಗೂ ಶ್ರೀನಿವಾಸ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿ.ಎ.ರಾಘವೇಂದ್ರರಾವ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಶ್ರೀನಿವಾಸ ಆಸ್ಪತ್ರೆ ಬಳಗಕ್ಕೆ ಡಾ. ಜಮೀಲಾ ಸಿ. ಅವರನ್ನು ಸ್ವಾಗತಿಸಲು ಆಸ್ಪತ್ರೆಯ ಆಡಳಿತ ಮಂಡಳಿ ಹೆಮ್ಮೆ ಪಡುತ್ತಿದೆ. ಖ್ಯಾತ ವೈದ್ಯೆಯಾಗಿರುವ ಜಮೀಲಾ ಪ್ರಸಿದ್ಧ ಒಬಿಜಿ ಪರಿಣತರು, ವೈದ್ಯಕೀಯ ಕ್ಷೇತ್ರದಲ್ಲಿ ಇಪ್ಪತ್ತಕ್ಕೂ ಅಧಿಕ ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಒಬ್ಬ ವೈದ್ಯೆ ಮತ್ತು ವೈದ್ಯಕೀಯ ಶಿಕ್ಷಕರಾಗಿದ್ದು, ಮಹಿಳಾ ಆರೋಗ್ಯದಲ್ಲಿ ಪರಿಣಿತರು. ಶ್ರೀನಿವಾಸದಲ್ಲಿ ಅವರ ಪರಿಣತಿಯ ಸೇವೆಯ ಪ್ರಯೋಜವನ್ನು ಪಡೆಯಬಹುದು. ಮೇ ಎರಡನೇ ವಾರದಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದ್ದು, ಇದರಂಗವಾಗಿ ಮಹಿಳಾ ಆರೋಗ್ಯ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀನಿವಾಸ ಸಂಸ್ಥೆಗಳ ಉಪಾಧ್ಯಕ್ಷ ಡಾ.ಸಿ.ಎ .ಶ್ರೀನಿವಾಸರಾವ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಅವಧಿಯಲ್ಲಿ ಆಸ್ಪತ್ರೆಯು ಸ್ತ್ರೀರೋಗ ಶಾಸ್ತ್ರ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಮಹಿಳೆಯರಿಗೆ ಮತ್ತು ಹೊರ ರೋಗಿಗಳಿಗೆ ಸಮಾಲೋಚನೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ನಡೆಸಲಿದೆ. ಅಗತ್ಯವಿದ್ದಲ್ಲಿ ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ನೀಡಲಾಗುವುದು. ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ತಪಾಸಣೆ ಮತ್ತು ಪ್ಯಾಪ್ ಸ್ಮೀಯರ್ ಪರೀಕ್ಷೆಗಾಗಿ ಸೊನೊಮೊಮ್ಮೊಗ್ರಿಯನ್ನು ಬಳಸಲಾಗುತ್ತದೆ. ಎರಡೂ ಪರೀಕ್ಷೆಗಳನ್ನು ಸ್ತ್ರೀ ರೋಗ ತಜ್ಞರು ನಡೆಸಲಿದ್ದು, ರಿಯಾಯಿತಿ ದರದಲ್ಲಿ ನಡೆಸಲಾಗುತ್ತದೆ.

ಮುಟ್ಟಿನ ಅಸ್ವಸ್ಥತೆಗಳು, ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಕುರಿತು ಅಭಿಯಾನದಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಮಹಿಳೆಯಲ್ಲಿ ಆರೋಗ್ಯ ಅರಿವು ಮೂಡಿಸುವುದು ಕೂಡಾ ಅಭಿಯಾನದ ಉದ್ದೇಶವಾಗಿದೆ ಎಂದು ಡಾ.ಶ್ರೀನಿವಾಸ ರಾವ್ ತಿಳಿಸಿದ್ದಾರೆ.

ಮಹಿಳೆಯರು ತಮ್ಮ ಆರೋಗ್ಯದ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಆರೋಗ್ಯದ ಅಗತ್ಯತೆಗಳ ಅನುಮಾನಗಳನ್ನು ಸ್ಪಷ್ಟಪಡಿಸುವ ಸಲುವಾಗಿ ಶಿಬಿರದ ಪ್ರಯೋಜನ ಪಡೆಯಬಹುದು. ಸಮಾಜದ ದುರ್ಬಲ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಇದೊಂದು ಉತ್ತಮ ಅವಕಾಶ. ಆಸಕ್ತಿ ಇರುವವರು ಆಸ್ಪತ್ರೆಯ ಹೊರರೋಗಿ ಇಲಾಖೆಯನ್ನು ಭೇಟಿ ಮಾಡುವ ಮೂಲಕ ಸೌಲಭ್ಯವನ್ನು ಪಡೆಯಬಹುದು. ಬೆಳಿಗ್ಗೆ 9 ರಿಂದ ಸಂಜೆ 4 ರ ತನಕ ಅಭಿಯಾನದ ಪ್ರಯೋಜನ ಪಡೆಯಬಹುದು. ಮಹಿಳೆಯರು ಸಮಾಜದ ಬೆನ್ನೆಲುಬು. ಆರೋಗ್ಯವಂತ ಮಹಿಳೆಯಿಂದ ಆರೋಗ್ಯಕರ ಕುಟುಂಬ. ಮಹಿಳೆಯರಿಗೆ ಈ ಅವಕಾಶದ ಪ್ರಯೋಜನ ಪಡೆಯಲು ಮತ್ತು ಆರೋಗ್ಯ ಸುಧಾರಣೆಗೆ ಇದೊಂದು ಅವಕಾಶ ಎಂದು ಡಾ.ಜಮೀಲಾ ತಿಳಿಸಿದ್ದಾರೆ.

ರಿಯಾಯಿತಿ ಪ್ಯಾಕೇಜ್

ಮಹಿಳಾ ಆರೋಗ್ಯ ಅಭಿಯಾನದ ಈ ಅವಧಿಯಲ್ಲಿ ಆಸ್ಪತ್ರೆಯು ಮಹಿಳಾ ಆರೋಗ್ಯ ಪರಿಶೀಲನಾ ಪ್ಯಾಕೇಜ್‌ನ್ನು ರಿಯಾಯಿತಿ ದರದಲ್ಲಿ ನೀಡಲಿದೆ. ಪ್ಯಾಕೇಜ್ ದರ ರೂ. 4000 /-(ಸಾಮಾನ್ಯ ದರ 5,500/-). ಈ ಪ್ಯಾಕೇಜ್ ಮೂಲಕ ಸಂಪೂರ್ಣ ರಕ್ತ ಪರೀಕ್ಷೆ, ಮಧುಮೇಹ, ಮೂತ್ರಪಿಂಡ ವಿವರ, ಲಿಪಿಡ್ ಸ್ವವಿವರ, ಮೂತ್ರ ಪರೀಕ್ಷೆ, ಟಿಎಸ್‌ಎಚ್., ಕ್ಯಾಲ್ಸಿಯಂ, ಫಾಸ್ಫರಸ್, ಇಸಿಜಿ, ಇಕೋ ಮತ್ತು ಕಲರ್ ಡೋಪ್ಲರ್, ಟಿಎಂಟಿ, ಎದೆ ಎಕ್ಸ್‌ರೇ, ಅಲ್ಟ್ರಾಸೌಂಡ್ - ಹೊಟ್ಟೆ / ಪೆಲ್ವಿಸ್, ಪ್ಯಾಪ್ ಸ್ಮೀಯರ್, ಮಮೊಗ್ರಮ್ ವರದಿಗಳೊಂದಿಗೆ ಸ್ತ್ರೀರೋಗ ತಜ್ಞರ ಮೌಲ್ಯ ಮಾಪನವನ್ನು ಪ್ಯಾಕೇಜ್ ಹೊಂದಿದೆ.

ಸುರಗಿರಿ ಮಹಿಳಾ ಮಂಡಳಿಯೊಂದಿಗೆ ಒಪ್ಪಂದ:- ಗ್ರಾಮೀಣ ಭಾಗದ ಮಹಿಳೆಯರಲ್ಲಿ ಆರೋಗ್ಯ ಸುಧಾರಣೆ ಮತ್ತು ಆರೋಗ್ಯ ಕಾಳಜಿ ಮೂಡಿಸಲು ಶ್ರೀನಿವಾಸ ಆಸ್ಪತ್ರೆ ಸುರಗಿರಿ ಮಹಿಳಾ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಭಿಯಾನದ ಅವಧಿಯಲ್ಲಿ ನೀಡಲಾಗುವ ರಿಯಾಯಿತಿ ಪ್ಯಾಕೇಜ್‌ನ ಪ್ರಯೋಜನವನ್ನು ಮಹಿಳಾ ಮಂಡಳಿಯ ಸದಸ್ಯರು ಕಾದಿರಿಸಿ ’ಮಹಿಳಾ ಆರೋಗ್ಯ ತಪಾಸಣೆ ಪ್ಯಾಕೇಜ್’ನ್ನು ಪಡೆಯಲಿದ್ದಾರೆ.

ಇದರಂಗವಾಗಿ ಆಸ್ಪತ್ರೆಯು ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಮಹಿಳೆಯರಿಗೆ ವಿವಿಧ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಡಾ.ಶ್ರೀನಿವಾಸರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ಆಸ್ಪತ್ರೆಯ ಡೀನ್ ಉದಯ ಕುಮಾರ್, ಡಾ.ಅಮರ್, ಡಾ.ಜಮೀಲಾ, ಸುರಗಿರಿ ಮಹಿಳಾ ಮಂಡಳಿ ಅಧ್ಯಕ್ಷೆ ನಿರ್ಮಲಾ ನಾಯಕ್, ಕಾರ್ಯದರ್ಶಿ ಗೀತಾ ಡಿ.ಆಳ್ವಾ, ಉತ್ಥಾನಾ ಬಳಗದ ಅಧ್ಯಕ್ಷೆ ಚೈತ್ರಾ ಶ್ರೀಕಾಂತರಾವ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News