ಜಾನಪದ ವಿದ್ವಾಂಸ ಪ್ರೊ. ಸುಬ್ಬಣ್ಣ ರೈ: ಹಂಪಿ ಕನ್ನಡ ವಿವಿ ಕುಲ ಸಚಿವರಾಗಿ ಆಯ್ಕೆ

Update: 2019-05-22 16:39 GMT

ಪುತ್ತೂರು: ಬಂಟ್ವಾಳ ತಾಲೂಕಿನ ವಿಟ್ಲ ನಿವಾಸಿ ಜಾನಪದ ವಿದ್ವಾಂಸ ಪ್ರೊ. ಸುಬ್ಬಣ್ಣ ರೈ ಅವರನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರೊ. ಸುಬ್ಬಣ್ಣ ರೈ ಅವರು ಆರಂಭಿಕ ಶಿಕ್ಷಣವನ್ನು ಕಾಸರಗೋಡಿನಲ್ಲಿ, ಪ್ರೌಢ ಶಿಕ್ಷಣವನ್ನು ನೀರ್ಜಾಲಿನ ಮಹಾರಾಜ ಸಂಸ್ಕೃತ ಕಾಲೇಜ್ ಹೈಸ್ಕೂಲ್‍ನಲ್ಲಿ, ಪಿಡಿಸಿ ಶಿಕ್ಷಣನ್ನು ಕ್ಯಾಲಿಕಟ್ ವಿವಿ ಅಧೀನದ ಕಾಸರಗೋಡು ಕಾಲೆಜಿನಲ್ಲಿ ಪಡೆದಿದ್ದಾರೆ. ಮದ್ರಾಸ್ ವಿವಿಯಿಂದ ಎಂಫಿಲ್, ಮುಂಬೈ ವಿವಿಯಿಂದ ಪಿಎಚ್‍ಡಿ ಪದವಿಯನ್ನೂ ಪಡೆದಿದ್ದಾರೆ.

ಮುಂಬೈನಲ್ಲಿರುವ ಕರ್ನಾಟಕ ಮಾಹಿತಿ ಕೇಂದ್ರದಲ್ಲಿ ವಿಶೇಷ ಮಾಹಿತಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಅವರು, 1992ರಲ್ಲಿ ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದ ಅವರು 15ಕ್ಕೂ ಅಧಿಕ ಸಂಶೋಧನಾ ಕೃತಿಗಳನ್ನು ಹೊರತಂದಿದ್ದಾರೆ. ಈವರೆಗೆ 17 ಸಂಶೋಧನಾ ಅಭ್ಯಾರ್ಥಿಗಳಿಗೆ, 4 ಎಂಫಿಲ್ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಇವರು ಮುಂಬೈ ವಿವಿಗೆ ಸಲ್ಲಿಸಿದ ದಕ್ಷಿಣಕನ್ನಡದ ಐತಿಹ್ಯಗಳೆಂಬ ಮಹಾಸಂಶೋಧನಾ ಮಹಾಪ್ರಬಂದಕ್ಕೆ ಮುಂಬೈ ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ದಕ್ಷಿಣಕನ್ನಡದ ಐತಿಹ್ಯ ಎಂಬ ಸಂಶೋಧನಾ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ ಕೂಡ ಲಭಿಸಿದೆ. ಅವರ ಪತ್ನಿ ಡಾ. ಸರಸ್ವತಿ ಕುಮಾರಿ ಅವರು ಮಂಗಳೂರಿನ ಸಂತ ಅಲೋಶಿಯೆಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News