ಸಮೀಕ್ಷೆಯ ಉದ್ದೇಶ ವಿಪಕ್ಷಗಳ ಒಗ್ಗಟ್ಟು ಭೇದಿಸುವುದು: ವೀರಪ್ಪ ಮೊಯ್ಲಿ

Update: 2019-05-22 17:03 GMT

ಹೈದರಾಬಾದ್, ಮೇ 22: ಕೇಂದ್ರದಲ್ಲಿ ಎನ್‌ಡಿಎ ಸರಕಾರ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂಬ ಭವಿಷ್ಯ ನುಡಿದಿರುವ ಚುನಾವಣೋತ್ತರ ಸಮೀಕ್ಷೆಯ ಉದ್ದೇಶ ಸ್ಟಾಕ್ ಮಾರುಕಟ್ಟೆಗಳಲ್ಲಿ ಹೂಡಿಕೆಗೆ ಉತ್ತೇಜನ ನೀಡುವುದು ಹಾಗೂ ವಿಪಕ್ಷಗಳ ಒಗ್ಗಟ್ಟು ಭೇದಿಸುವುದಾಗಿದೆ ಎಂದು ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಈ ಸಮೀಕ್ಷೆಗಳು ವಾಸ್ತವವಲ್ಲ. ಇದರಲ್ಲಿ ಹಲವು ತಪ್ಪುಗಳಿವೆ ಎಂದು ಇಂತಹ ಸಮೀಕ್ಷೆ ನಡೆಸಿರುವ ಸಂಸ್ಥೆಗಳೇ ಹೇಳಿಕೆ ನೀಡಿವೆ. ಈ ಸಮೀಕ್ಷೆಯ ಹಿಂದೆ ಕೆಲವು ದುರುದ್ದೇಶಗಳಿವೆ. ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆಗೆ ಉತ್ತೇಜನ ನೀಡುವುದೂ ಇದರಲ್ಲಿ ಸೇರಿದೆ. ಕೆಲವರು ಸುಮಾರು 5 ಕೋಟಿ ರೂ. ಯಷ್ಟು ಲಾಭ ಮಾಡಿಕೊಂಡಿದ್ದಾರೆ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ. ಇನ್ನೊಂದು ಉದ್ದೇಶ ವಿಪಕ್ಷಗಳ ಒಗ್ಗಟ್ಟು ಮುರಿಯುವುದು. ಇದರಲ್ಲಿ ಅವರು ಯಶಸ್ವಿಯಾಗಿಲ್ಲ. ಮತ ಎಣಿಕೆಯ ದಿನದಂದು ವಿಪಕ್ಷಗಳು ಬಹುಮತ ಗಳಿಸಿದರೂ ಆಶ್ಚರ್ಯವಿಲ್ಲ ಎಂದರು. ಬಿಜೆಪಿಯೇತರ, ಎನ್‌ಡಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಯಶಸ್ವಿಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರಿಗೂ ಮೋದಿ ಮತ್ತು ಬಿಜೆಪಿ ಸಮಾನ ಶತ್ರುಗಳಾಗಿದ್ದಾರೆ. ಆದ್ದರಿಂದ ಇವರು ಬಿಜೆಪಿ ಜೊತೆ ಹೋಗುತ್ತಾರೆ ಎಂದು ತನಗನಿಸದು ಎಂದರು.

ವಿಪಕ್ಷಗಳು ಬಹುಮತ ಸಾಧಿಸಲು ಶಕ್ತರಾದರೆ ಬಳಿಕ ಪ್ರಧಾನಿಯನ್ನು ಆಯ್ಕೆ ಮಾಡಲು ಕಷ್ಟವಾಗುವುದಿಲ್ಲ ಎಂದ ಮೊಯ್ಲಿ, ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಹಕ್ಕು ಮಂಡಿಸಲಿದೆಯೇ ಎಂಬ ಪ್ರಶ್ನೆಗೆ, ಏನಿದ್ದರೂ ಫಲಿತಾಂಶ ಹೊರಬಿದ್ದ ಬಳಿಕ ಈ ಪ್ರಶ್ನೆಗೆ ಪ್ರತಿಕ್ರಿಯಿಸುತ್ತೇನೆ ಎಂದುತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News