ನಳಿನ್‌ಕುಮಾರ್ ಕಟೀಲ್‌ಗೆ ದಾಖಲೆಯ ಗೆಲುವು: ಮಂಗಳೂರಿನ ವಿವಿಧೆಡೆ ಬಿಜೆಪಿ ಸಂಭ್ರಮಾಚರಣೆ

Update: 2019-05-23 15:36 GMT

ಮಂಗಳೂರು, ಮೇ 23: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರು ಭರ್ಜರಿ, ದಾಖಲೆಯ ಜಯ ಗಳಿಸಿದ ಹಿನ್ನೆಲೆಯಲ್ಲಿ ನಗರದ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಬಿಜೆಪಿ ಚುನಾವಣಾ ಕಚೇರಿಯಿಂದ ಪಿವಿಎಸ್ ಬಳಿ ಇರುವ ಬಿಜೆಪಿ ಜಿಲ್ಲಾ ಕಚೇರಿವರೆಗೆ ಗುರುವಾರ ಸಂಜೆ ವಿಜಯೋತ್ಸವ ನಡೆಯಿತು.

ಬಿಜೆಪಿಯ ಬೃಹತ್ ಧ್ವಜಗಳನ್ನು ಹಿಡಿದ ಕಾರ್ಯಕರ್ತರು ಜಯಘೋಷ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ, ಪರಸ್ಪರ ಬಣ್ಣಗಳನ್ನು ಎರಚುತ್ತಾ ಬಿಜೆಪಿ ವಿಜಯದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.

ಬೃಹತ್ ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಹ್ಯಾಟ್ರಿಕ್ ವಿಜಯಿ ನಳಿನ್ ಕುಮಾರ್ ಕಟೀಲು ಅವರನ್ನು ಎತ್ತಿಕೊಂಡು ಕುಣಿದರು. 2.7 ಲಕ್ಷಕ್ಕೂ ಅಧಿಕ ಮತಗಳಿಂದ ವಿಜಯಿಯಾದ ಸಾಧನೆಗೆ ನಳಿನ್ ಅವರನ್ನು ಅಭಿನಂದಿಸಿದರು.

‘ಭಾರತ್ ಮಾತಾ ಕೀ.. ಜೈ, ಮೋದಿ.. ಮೋದಿ.., ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲು ಅವರಿಗೆ ಜೈಕಾರ ಹಾಕುತ್ತಾ ಸಾಗಿದ ಕಾರ್ಯಕರ್ತರು, ಬ್ಯಾಂಡ್ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಬಿಜೆಪಿ ವಿಜಯದ ಖುಷಿ ಹಂಚಿಕೊಂಡರು. ಬಿಜೆಪಿ ಜಿಲ್ಲಾ ಕಾರ್ಯಾಲಯದ ಬಳಿ ಕಾರ್ಯಕರ್ತರಿಂದ ವಿಜಯೋತ್ಸವ ನಡೆದ ಬಳಿಕ ಮೆರವಣಿಗೆ ಸಂಪನ್ನಗೊಂಡಿತು.

ಬಿಜೆಪಿ ವಿಜಯದ ಹಿನ್ನೆಲೆಯಲ್ಲಿ ಬಿಜೆಪಿ ಲೋಕಸಭಾ ಚುನಾವಣಾ ಕಚೇರಿ, ಬಿಜೆಪಿ ಜಿಲ್ಲಾ ಕಚೇರಿ ಮತ್ತು ನಗರದ ವಿವಿಧ ಕಡೆ ನಡೆದ ಸಂಭ್ರಮಾಚರಣೆಯಲ್ಲಿ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.

ಪುತ್ತೂರು ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರ್, ಪ್ರಮುಖರಾದ ಕಿಶೋರ್ ರೈ, ಸಂದೇಶ್ ಶೆಟ್ಟಿ, ರೂಪಾ ಡಿ. ಬಂಗೇರ, ಪ್ರಭಾಮಾಲಿನಿ, ನಮಿತಾ ಶ್ಯಾಂ, ಪೂರ್ಣಿಮಾ ಮತ್ತಿತರರು ಪಾಲ್ಗೊಂಡಿದ್ದರು.

ಮದುವೆಯಲ್ಲಿ ಚುನಾವಣಾ ಫಲಿತಾಂಶದ ಬೃಹತ್ ಪರದೆ!:

ಮದುವೆ ಕಾರ್ಯಕ್ರಮವೊಂದರಲ್ಲಿ ಬೃಹತ್ ಪರದೆಯ ಮೂಲಕ ಲೋಕಸಭಾ ಚುನಾವಣಾ ಫಲಿತಾಂಶ ನೋಡಲು ವ್ಯವಸ್ಥೆ ಮಾಡಿದ ಘಟನೆ ಕರ್ನಾಟಕದ ಗಡಿ ಕಾಸರಗೋಡು ಜಿಲ್ಲೆಯ ಪೆರ್ಲ ಎಂಬಲ್ಲಿ ನಡೆದಿದೆ.

ಪೆರ್ಲದ ಶಂಕರ ಸದನ ಮಂಟಪದಲ್ಲಿ ಪ್ರದೀಪ್ ಮತ್ತು ಸೌಮ್ಯಾ ಇವರ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆದರೆ ಮದುವೆಗೆ ಬಂದ ಬಂಧುಗಳು, ಸ್ನೇಹಿತರು ಲೋಕಸಭಾ ಚುನಾವಣೆಯ ಫಲಿತಾಂಶ ಚುನಾವಣಾ ಫಲಿತಾಂಶ ವೀಕ್ಷಿಸಲು ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ಮದುವೆ ಕಾರ್ಯಕ್ರಮಕ್ಕೆ ಬಂದಿರುವವರು ಚುನಾವಣಾ ಫಲಿತಾಂಶವನ್ನು ವೀಕ್ಷಿಸಿದರು.

ಮದುವೆ ಕಾರ್ಯಕ್ರಮದಲ್ಲಿ ಚುನಾವಣಾ ಫಲಿತಾಂಶದ ಬೃಹತ್ತಾದ ಫಲಕವನ್ನು ಅಳವಡಿಸಿದ ಫೋಟೊ, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದೆ.

ಫಲಿತಾಂಶಕ್ಕೂ ಮುನ್ನ ಸಂಭ್ರಮಾಚರಣೆ: ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುವಾರ ಭರ್ಜರಿ ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದ ವೇಳೆ ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

ಫಲಿತಾಂಶಕ್ಕೂ ಮುನ್ನ ನಡೆದ ಸಂಭ್ರಮಾಚರಣೆ ವೇಳೆ 4,03,214 ಮತಗಳ ಎಣಿಕೆಯಾಗಿದ್ದವು. ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ 86,576 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದ ವೇಳೆ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News