ಪುತ್ತೂರಿನ ಮೂವರು ಮತ್ತೊಮ್ಮೆ ಲೋಕಸಭಾ ಸದಸ್ಯರು

Update: 2019-05-23 15:43 GMT

ಪುತ್ತೂರು : ಪುತ್ತೂರು ತಾಲೂಕಿನವರಾಗಿದ್ದು ಇತ್ತೀಚೆಗಷ್ಟೇ ಪುತ್ತೂರಿನಿಂದ ಬೆಂಗಳೂರಿಗೆ ಮನೆಯನ್ನು ವರ್ಗಾಯಿಸಿರುವ ಡಿ.ವಿ.ಸದಾನಂದ ಗೌಡ, ಶೋಭಾ ಕರಂದ್ಲಾಜೆ ಮತ್ತು ನಳಿನ್ ಕುಮಾರ್ ಕಟೀಲ್ ಇವರು ಮೂವರೂ ಇದೀಗ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಜಯಗಳಿಸಿದ್ದಾರೆ.

ಮೂಲತ: ಸುಳ್ಯದವರಾಗಿದ್ದು ಕಳೆದ ಹಲವು ವರ್ಷಗಳಿಂದ ಪುತ್ತೂರು ನಗರದ ಹಾರಾಡಿ ಎಂಬಲ್ಲಿ ಮನೆ ಮಾಡಿಕೊಂಡಿದ್ದ ಡಿ.ವಿ.ಸದಾನಂದ ಗೌಡ ಅವರು ಪುತ್ತೂರಿನಲ್ಲಿ ವಕೀಲ ವೃತ್ತಿಯ ಜೊತೆಗೆ ಈ ಕ್ಷೇತ್ರದಲ್ಲಿಯೇ ರಾಜಕೀಯ  ಪ್ರವೇಶ ಮಾಡಿದವರು.  ಆರಂಭದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರೂ ಬಳಿಕ ಸತತ ಎರಡು ಬಾರಿ ಗೆಲುವು ಸಾಧಿಸಿ ಪುತ್ತೂರು ಕ್ಷೇತ್ರದ ಶಾಸಕರಾಗಿದ್ದರು. ಅಲ್ಲದೆ ರಾಜ್ಯದ ಮುಖ್ಯಮಂತ್ರಿಯೂ, ಕೇಂದ್ರ ಸಚಿವರೂ ಆದವರು. ಮಂಗಳೂರು ಲೋಕಸಭಾ ಕ್ಷೇತ್ರ, ಉಡುಪಿ ಲೋಕಸಭಾ ಕ್ಷೇತ್ರ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಜಯಿಯಾಗಿದ್ದ ಸದಾನಂದ ಗೌಡರು ಇದೀಗ ಮತ್ತೆ ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಪಡೆದಿದ್ದಾರೆ.

ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದವರಾದ ಶೋಭಾ ಕರಂದ್ಲಾಜೆ ಅವರು ಸಂಘ ಪರಿವಾರದಲ್ಲಿ ಗುರುತಿಸಿಕೊಂಡವರು. ಅವರ ಆರಂಭದ ಕಾರ್ಯಕ್ಷೇತ್ರವೂ ಪುತ್ತೂರು ಆಗಿತ್ತು. ಕುಮಾರಧಾರ ನದಿಗೆ ಅಣೆಕಟ್ಟು ನಿರ್ಮಾಣದ ವಿರುದ್ಧದ ಹೋರಾಟಕ್ಕೆ ಧುಮಿಕಿದ್ದ ಶೋಭಾ ಕರಂದ್ಲಾಜೆ ಅವರು ಹೋರಾಟ ಮನೋಭಾವದ ಮೂಲಕವೇ ರಾಜಕೀಯ ಪ್ರವೇಶ ಮಾಡಿದ್ದರು. ಈ ಹಿಂದೆ ಬೆಂಗಳೂರು ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದ ಅವರು ಸಚಿವೆಯೂ ಆಗಿದ್ದರು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಇದೀಗ ಅವರು ಎರಡನೇ ಬಾರಿಗೆ ವಿಜಯ ಸಾದಿಸಿದ್ದಾರೆ.

ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಗೆಲುವು ಪಡೆದಿರುವ  ನಳಿನ್‍ಕುಮಾರ್ ಕಟೀಲು ಅವರು ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಕುಂಜಾಡಿಯವರು. ಪುತ್ತೂರಿನಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದವರು. ಕಳೆದ ಮೂರು ಬಾರಿಯೂ ಗೆಲುವಿನ ಅಂತರವನ್ನು ಹೆಚ್ಚಿಸುತ್ತಾ ಬಂದವರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News