ಸೋಲಿನಲ್ಲಿ ಪಾಠ ಕಲಿತು ಎಲ್ಲರನ್ನೊಳಗೊಂಡ ಭಾರತ ಕಟ್ಟಲು ಪ್ರಯತ್ನಿಸಬೇಕಿದೆ: ಪಾಪ್ಯುಲರ್ ಫ್ರಂಟ್

Update: 2019-05-23 18:17 GMT

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ದೊರಕಿರುವ ಗೆಲುವು  ಭಾರತದಲ್ಲಿ ಜಾತ್ಯತೀತ ರಾಜಕೀಯದ ಅಂತಿಮ ಸೋಲಲ್ಲ. ಬದಲಾಗಿ ಭಾವನಾತ್ಮಕ ಕೋಮುವಾದಿ ಪ್ರಚಾರದ ಯಶಸ್ಸು ಮತ್ತು ಆರೆಸ್ಸೆಸ್, ಬಿಜೆಪಿ ತಂತ್ರ ಗಾರಿಕೆಯನ್ನು ಎದುರಿಸಲು ಸೂಕ್ತ  ಕ್ರಮ ಕೈಗೊಳ್ಳಲು ಜಾತ್ಯತೀತ ಪಕ್ಷಗಳು ವಿಫಲರಾಗಿರುವುದನ್ನು ಸಾಬೀತುಪಡಿಸುತ್ತದೆ  ಎಂದು  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕೇಂದ್ರ ಸೆಕ್ರೇಟರಿಯೇಟ್ ಸಭೆ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.

ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಪಿಎಫ್ಐ ಈ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ.

ಈ ವೈಫಲ್ಯದ ಹೊರತಾಗಿಯೂ ಎಲ್ಲರನ್ನೊಳಗೊಂಡ ಜಾತ್ಯತೀತ, ಪ್ರಜಾಸತ್ತಾತ್ಮಕ, ಸಮಾಜವಾದಿ ಗಣರಾಜ್ಯ ಭಾರತವೆಂಬ ಕಲ್ಪನೆಯು ಉಳಿಯಲಿದೆ ಎಂದು ಸಭೆ ಹೇಳಿದೆ.

ಎಲ್ಲಾ ಹಂತಗಳಲ್ಲಿ ವಿಫಲವಾಗಿರುವ ಸರಕಾರವೊಂದನ್ನು ನಡೆಸುತ್ತಿರುವ ಹೊರತಾಗಿಯೂ ಬಿಜೆಪಿ ಗೆದ್ದಿರುವುದು ಸೂಕ್ಷ್ಮ ಪರಿಶೀಲನೆಯ ಅಗತ್ಯವನ್ನು ಒತ್ತಿ ಹೇಳುತ್ತಿದೆ. ಐದು ವರ್ಷಗಳ ಜನ ವಿರೋಧಿ ಆಡಳಿತದ ಹೊರತಾಗಿಯೂ ಬಿಜೆಪಿ ಭಾರತೀಯ ಸಮಾಜದ ಗಣನೀಯ ವರ್ಗಗಳ  ಜನಬೆಂಬಲವನ್ನು ಉಳಿಸಿಕೊಂಡಿರುವುದು ಅಭಿವೃದ್ಧಿ ವಿಷಯಗಳ ಮೇಲೆ ಕೋಮುದ್ವೇಷವು ಮೇಲುಗೈ ಸಾಧಿಸಿರುವುದನ್ನು ತೋರಿಸುತ್ತದೆ.

ತಮ್ಮ ನಾಯಕರ ನಡುವಿನ ಭಿನ್ನಾಭಿಪ್ರಾಯ, ಸ್ವಾರ್ಥ ಮತ್ತು ಸಣ್ಣಪುಟ್ಟ ಹಮ್ಮು ಭಾವನೆಯನ್ನು ಬದಿಗಿಟ್ಟು ಒಗ್ಗಟ್ಟಿನ ಪ್ರದರ್ಶನ ತೋರ್ಪಡಿಸುವ ಬದಲು ಜಾತ್ಯತೀತ ಪಕ್ಷ ಗಳು 2014ರ ತಮ್ಮ ತಪ್ಪನ್ನು ಮುಂದುವರಿಸಿದವು ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ. ಇನ್ನೊಂದೆಡೆ, ತಳಮಟ್ಟದಲ್ಲಿ ಕೋಮುವಾದೀಕರಣ ಮಾಡುವುದರ ಜೊತೆಗೆ ಎಲ್ಲಾ ಬಹುತೇಕ ಪ್ರಾದೇಶಿಕ ಪಕ್ಷಗಳನ್ನು ಎನ್ ಡಿ ಎ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಉತ್ತರ ಪ್ರದೇಶ ಮತ್ತು ದಿಲ್ಲಿಯಲ್ಲಿ ವಿರೋಧ ಪಕ್ಷಗಳು ತಮ್ಮೊಳಗೆ ಸ್ಪರ್ಧಿಸುವುದರ ಬದಲು ಪರಸ್ಪರ ಕೈಜೋಡಿಸಿ ಕೊಂಡಿದ್ದರೆ  ಫಲಿತಾಂಶವು ಭಿನ್ನವಾಗಿರುತ್ತಿತ್ತು. ಹಾಸ್ಯಾಸ್ಪದ ವೆಂದರೆ, ಹೊಸ 'ಜಾತ್ಯತೀತ ಪ್ರಜಾಸತ್ತಾತ್ಮಕ ವೇದಿಕೆ' ಎಂಬ ಬೃಹತ್ ಮೈತ್ರಿ ಕೂಟ ಸ್ಥಾಪನೆಯ ಅವರ ಘೋಷಣೆ ಹೊರಬಿದ್ದಿರುವುದು ಚುನಾವಣೆಯ ಬಳಿಕವಷ್ಟೆ. ಜಾತ್ಯತೀತ ಪಕ್ಷಗಳು ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸ್ಪರ್ಧಿಸುವ ಮೂಲಕ ಅಲ್ಪಸಂಖ್ಯಾತರನ್ನು ಇಕ್ಕಟ್ಟಿನ  ಪರಿಸ್ಥಿತಿಗೆ ತಳ್ಳಿದ್ದರೂ ಇದೀಗ ಮತ್ತೊಮ್ಮೆ ಬಿಜೆಪಿಯನ್ನು ಸೋಲಿಸುವ ಜವಾಬ್ದಾರಿ ಯನ್ನು ಅವರ ತಲೆಗೇ ಕಟ್ಟಲಾಗಿದೆ ಎಂದು ಪಿಎಫ್ಐ ಹೇಳಿಕೆಯಲ್ಲಿ ತಿಳಿಸಿದೆ.

ಚುನಾವಣೆಯು ಎಲ್ಲರ ಕಣ್ಣನ್ನು ತೆರೆಸಬೇಕು. ಹೊಣೆಗಾರಿಕೆಯ ಸರಕಾರ ಮತ್ತು ಜವಾಬ್ದಾರಿಯುತ ವಿರೋಧ ಪಕ್ಷದ ಮೂಲಕ ಮಾತ್ರವೇ ಪ್ರಜಾಸತ್ತೆಯು  ಉಳಿಯಬಹುದು. ಅವೆರಡೂ ಜನತೆಯ ಹಕ್ಕನ್ನು ರಕ್ಷಿಸಲು ಮತ್ತು ಸಾಂವಿಧಾನಿಕ ಹಾಗೂ  ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಲು ಹೊಣೆಗಾರರಾಗಿದ್ದಾರೆ. ಕೋಮು ರಾಜಕೀಯದ ಪರಿಣಾಮವನ್ನು ಎದುರಿಸುತ್ತಿರುವ ಮತ್ತು ಆಡಳಿತದ ಬದಲಾವಣೆಯ ನಿರೀಕ್ಷೆಯಲ್ಲಿದ್ದ ಸಮಾಜದ ವರ್ಗವು ಇದರಿಂದ ಹತಾಶರಾಗಬೇಕಿಲ್ಲ. ದೇಶದಲ್ಲಿರುವ ಎಲ್ಲಾ ಸಕಾರಾತ್ಮಕ ಶಕ್ತಿಗಳೊಂದಿಗೆ ಸೇರಿಕೊಂಡು ಸ್ವಯಂ ಸಬಲೀಕರಣದ ತಮ್ಮ ಪ್ರಯತ್ನವನ್ನು ಮುಂದುವರಿಸಬೇಕು.

ಸರ್ವಾಧಿಕಾರ, ಬಂಡವಾಳ ಶಾಹಿತ್ವ ಮತ್ತು ಕೋಮುವಾದದ ಹಿಡಿತದಿಂದ ರಾಷ್ಟ್ರ ಮತ್ತು ಅದರ ಜನರ ರಕ್ಷಣೆಗಾಗಿ ಒಂದು ಶಾಶ್ವತ ಪರಿಹಾರವಾಗಿ ಸೈದ್ಧಾಂತಿಕವಾಗಿ ಬದ್ಧವಾದ ಮತ್ತು ಪ್ರಬಲ ತಂತ್ರ ಗಾರಿಕೆಯಿರುವ ಹೊಸ ರಾಜಕೀಯ ಪಡೆ ಮತ್ತು ನಾಯಕತ್ವ ಉದಯ ವಾಗಬೇಕು. ಭಾರತೀಯ ಸಂವಿಧಾನವು ನೀಡುವ ಸಮಾನ ನ್ಯಾಯ ಮತ್ತು ಹಕ್ಕುಗಳನ್ನು ಅನುಭವಿಸುವುದಕ್ಕಾಗಿ ದುರ್ಬಲ ವರ್ಗಗಳನ್ನು ಸಬಲೀಕರಣಗೊಳಿಸುವ ತನ್ನ ನಿರ್ಣಯವನ್ನು ಪಾಪ್ಯುಲರ್ ಫ್ರಂಟ್ ಮರು ಖಾತರಿಪಡಿಸುತ್ತದೆ  ಎಂದು ಪಿಎಫ್ಐ ಪ್ರಧಾನ ಕಾರ್ಯದರ್ಶಿ ಎಮ್ ಮುಹಮ್ಮದ್ ಅಲಿ ಜಿನ್ನಾ  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News