ಮೇ 26ರಂದು ಉಡುಪಿಯಲ್ಲಿ ಸಾಮಗ ಸಪ್ತತಿ

Update: 2019-05-24 12:30 GMT

ಉಡುಪಿ, ಮೇ 24: ಹಿರಿಯ ಯಕ್ಷಗಾನ ಕಲಾವಿದ, ಶ್ರೇಷ್ಠ ಅರ್ಥಧಾರಿ, ಹರಿಕಥಾ ಪ್ರವೀಣ ಎಂ.ಆರ್.ವಾಸುದೇವ ಸಾಮಗರ 70ರ ಸಂಭ್ರಮ ‘ಸಾಮಗ ಸಪ್ತತಿ’ ಆಚರಣೆ, ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮೇ 26ರ ರವಿವಾರ ಬೆಳಗ್ಗೆ 9:30ರಿಂದ ರಾತ್ರಿ 9:30ರವರೆಗೆ ಇಡೀ ದಿನದ ಕಾರ್ಯಕ್ರಮವಾಗಿ ಸಂಪನ್ನಗೊಳ್ಳಲಿದೆ.

ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮ ವನ್ನು ಸಂಯಮಂ ಕೋಟೇಶ್ವರ, ಉಡುಪಿ ಯಕ್ಷಗಾನ ಕಲಾರಂಗದ ಸಹಯೋಗದೊಂದಿಗೆ ಆಯೋಜಿಸಿದೆ.

ರವಿವಾರ ಬೆಳಗ್ಗೆ 9:30ಕ್ಕೆ ಅದಮಾರು ಮಠಾಧೀಶ ಶ್ರೀಈಶಪ್ರಿಯತೀರ್ಥ ಶ್ರೀ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪಿ.ಕಿಶನ್ ಹೆಗ್ಡೆ ಹಾಗೂ ರಾಜಶೇಖರ್ ಹೆಬ್ಬಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 10 ಗಂಟೆಗೆ ನಡೆಯುವ ಮಲ್ಪೆರಾಮದಾಸ ಸಾಮಗರ ಸಂಸ್ಮರಣೆ ಮತ್ತು ರಾಮದಾಸ ಸಾಮಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರೊ. ಎಂ.ಎಲ್.ಸಾಮಗ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಕಂದಾವರ ರಘುರಾಮ ಶೆಟ್ಟಿ ಮತ್ತು ಬೋಳಾರ ಸುಬ್ಬಯ್ಯ ಶೆಟ್ಟಿ ರಾಮದಾಸ ಸಾಮಗ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

10:30ಕ್ಕೆ ನಡೆಯುವ ವಾಸುದೇವ ಸಾಮಗರ ಕಲಾಸಾಧನೆಯ ವಿವಿಧ ಮುಖಗಳಅನಾವರಣ ಗೋಷ್ಠಿಯ ಅಧ್ಯಕ್ಷತೆಯನ್ನು ಅಂಬಾತನಯ ಮುದ್ರಾಡಿ ವಹಿಸಲಿದ್ದಾರೆ. ಕೆ.ಗೋವಿಂದ ಭಟ್, ಎಂ.ಕೆ.ರಮೇಶ ಆಚಾರ್ಯ, ಶ್ರೀಧರ ಡಿ.ಎಸ್., ಸುಬ್ರಹ್ಮಣ್ಯ ಧಾರೇಶ್ವರ, ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಉಜಿರೆ ಅಶೋಕ್ ಭಟ್, ವಾಸುದೇವ ರಂಗಾ ಭಟ್ ಮುಂತಾದ ಕಲಾವಿದರು ಸಾಮಗರ ಕಲಾಸಾಧನೆಯ ವಿವಿಧ ಮುಖಗಳನ್ನು ಪರಿಚಯಿಸಲಿದ್ದಾರೆ. ಅಪರಾಹ್ನ 12 ರಿಂದ 1 ಗಂಟೆಯವರೆಗೆ ವಾಸುದೇವ ಸಾಮಗರಿಂದ ‘ಜನಕನ ಕನಸು’ ಹರಿಕಥಾ ಕಾಲಕ್ಷೇಪ ಜರಗಲಿದೆ.

ಅಪರಾಹ್ನ 2 ರಿಂದ 4 ರವರೆಗೆ ಸಾಮಗರೊಡನೆ ಸಂವಾದಗೋಷ್ಠಿ ನಡೆಯಲಿದ್ದು, ಡಾ.ವೈಕುಂಠ ಹೆರ್ಳೆ, ಪೂಕಳ ಲಕ್ಷ್ಮೀನಾರಾಯಣ ಭಟ್, ಪ್ರದೀಪ ವಿ. ಸಾಮಗ ಭಾಗವಹಿಸಲಿದ್ದಾರೆ.

ಪ್ರಧಾನ ಸಮಾರಂಭ ಸಂಜೆ 4:30ಕ್ಕೆ ಪ್ರೊ.ಎಂ.ಎ.ಹೆಗಡೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀ ಅನುಗ್ರಹ ಸಂದೇಶ ನೀಡಲಿದ್ದಾರೆ. ಟಿ.ಶ್ಯಾಮ್ ಭಟ್ ಸಾಮಗರ ಕುರಿತ ಅಭಿನಂದನಾ ಗ್ರಂಥ ‘ಸಾಮಗಾಥೆ’ಯನ್ನು ಬಿಡುಗಡೆ ಮಾಡಲಿದ್ದು, ಎಚ್. ಶ್ರೀಧರ ಹಂದೆ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮ ದಲ್ಲಿ ಆನಂದ ಸಿ. ಕುಂದರ್ ಮತ್ತು ಪ್ರದೀಪ ಕುಮಾರ್ ಕಲ್ಕೂರ್ ಅತಿಥಿಗಳಾಗಿ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಸಾಮಗರು, ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿ ಅಂಬಲಪಾಡಿ, ಶ್ರೀಗಜಾನನ ಯಕ್ಷಗಾನ ಸಂಘ ತೊಟ್ಟಂ, ಯಕ್ಷಗಾನ ಕಲಾಕ್ಷೇತ್ರ ಗುಂಡಿಬೈಲು, ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರ, ಸನ್ಯಾಸಿಮಠ ಬಡಾನಿಡಿಯೂರು, ಯಕ್ಷಕಲಾರಕ್ಷ ಕಲಿಕಾಕೇಂದ್ರ ಹೊನ್ನಾವರ, ಯಕ್ಷ ದೇಗುಲ ಕಾಂತಾವರ, ಯುವಕ ಯಕ್ಷಗಾನ ಕಲಾಮಂಡಳಿ ಸುಳ್ಯ,ನೀಲಾವರ ಗೋಶಾಲೆ ಸಂಘಟನೆಗಳನ್ನು ನಿಧಿ ಸಮರ್ಪಣೆಯೊಂದಿಗೆ ಗೌರವಿಸಲಿದ್ದಾರೆ.

ಸಂಜೆ 7 ರಿಂದ 9:30ರವರೆಗೆ ವಾಸುದೇವ ಸಾಮಗರು ರಚಿಸಿದ ‘ಶ್ರೀಕೃಷ್ಣ ತುಲಾಭಾರ’ ಯಕ್ಷಗಾನ, ಹಿರಿಯ ಕಲಾವಿದರ ಸಹಯೋಗದಲ್ಲಿ ನಡೆಯಲಿದೆ ಎಂದು ಯಕ್ಷಗಾನ ಕಲಾರಂಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News