ದೇಶ, ರಾಜ್ಯ, ಜಿಲ್ಲೆ ಕಾಂಗ್ರೆಸ್ ಮುಕ್ತವಾಗಿದೆ: ನಳಿನ್ ಕುಮಾರ್ ಕಟೀಲ್

Update: 2019-05-24 12:40 GMT

ಪುತ್ತೂರು: ಈ ಬಾರಿ ಲೋಕಸಭಾ ಚುನಾವಣೆಯ ಫಲಿತಾಂಶದಿಂದ ದೇಶ, ರಾಜ್ಯ ಮತ್ತು ಜಿಲ್ಲೆ ಕಾಂಗ್ರೆಸ್ ಮುಕ್ತವಾಗಿದೆ. ಈ ದೇಶದ ಮಹಾನ್ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮುಂದೆ ದೇಶದ ಎಡರಂಗ ಮತ್ತು ಕಾಂಗ್ರೆಸ್ ಮಿತ್ರ ಪಕ್ಷಗಳು ರಾಜಕೀಯವಾಗಿ ಹೇಳ ಹೆಸರಿಲ್ಲದಂತಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಶುಕ್ರವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬಿಜೆಪಿಯ ಮತ್ತು ಸಂಘ ಪರಿವಾರದ ಪ್ರಯೋಗ ಶಾಲೆಯಾಗಿರುವ ಪುತ್ತೂರು ಮತ್ತು ಸುಳ್ಯಗಳಲ್ಲಿ ಪಕ್ಷವು ಸಂಪೂರ್ಣ ಹಿಡಿತ ಸಾಧಿಸಿದೆ. ವಿಪಕ್ಷಗಳು ಮತ್ತೆ ತಲೆಯೆತ್ತಲಾರದ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಸಮೀಕ್ಷೆಗೆ ನಿಲುಕದ ಫಲಿತಾಂಶ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಬಂದಿದೆ. ಕಾರ್ಯಕರ್ತರ ಅವಿರತ ಪರಿಶ್ರಮ, ಮತದಾರರ ಅಭೂತಪೂರ್ವ ಬೆಂಬಲ ಇದಕ್ಕೆ ಕಾರಣವಾಗಿದೆ ಎಂದರು.

ಭಾರತವು ತ್ಯಾಗ ಭೂಮಿಯಾಗಿದೆ. ಗುರು ಪರಂಪರೆಯನ್ನು ಹೊಂದಿದೆ. ಗುರುವಿನ ಮಾರ್ಗದರ್ಶನದಲ್ಲಿ ಇಲ್ಲಿನ ರಾಜರು ಆಡಳಿತ ನಡೆಸುತ್ತಿದ್ದರು. ಭಗವಾಧ್ವಜವನ್ನು ಗುರುವಾಗಿ ಸ್ವೀಕರಿಸಿರುವ ರಾಜಕೀಯ ಸಂತನ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ತ್ಯಾಗ ಭೂಮಿ ಭಾರತವನ್ನು ಪರಮ ವೈಭವ ಸ್ಥಿತಿಗೆ ಕೊಂಡೊಯ್ಯಲಿದ್ದಾರೆ. ಆದರ್ಶ ರಾಜಕಾರಣದ ಮೂಲಕ ಮೋದಿ ಈ ದೇಶದ ಜನರ ಹೃದಯ ಗೆದ್ದಿದ್ದಾರೆ. ಮೋದಿಯವರೊಂದಿಗೆ ಕೆಲಸ ಮಾಡಲು ಅವಕಾಶ ನೀಡಿದ ಜಿಲ್ಲಾ ಲೋಕಸಭಾ ಕ್ಷೇತ್ರದ ಮತದಾರರಿಗೆ ನಾನು ನನ್ನ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಎಲ್ಲಾ ವರ್ಗದ ಜನ ಮೋದಿಯವರ ನಾಯಕತ್ವವನ್ನು ಒಪ್ಪಿ ಬಿಜೆಪಿಗೆ ಮತ ನೀಡಿದ್ದಾರೆ. ಅಲ್ಪಸಂಖ್ಯಾತರಿಗೂ ಕೂಡಾ ಬಿಜೆಪಿಯ ಮೇಲೆ ವಿಶ್ವಾಸ ಬಂದಿದೆ. ಇದರ ಪರಿಣಾಮ ಎಲ್ಲಾ ಬೂತ್‍ಗಳಲ್ಲೂ ಬಿಜೆಪಿಗೆ ಮುನ್ನಡೆ ಬಂದಿದೆ. ಪ್ರಜಾಪ್ರಭುತ್ವದ ಗೆಲುವು ಇಲ್ಲಿ ಸಾಧನೆಯಾಗಿದೆ. ದ.ಕ.ಜಿಲ್ಲೆಯ ಚೌಕಿದಾರ ನಳಿನ್ ಕುಮಾರ್ ಕಟೀಲ್ ಮಗದೊಮ್ಮೆ ಸಂಸದರಾಗಿ ಆಯ್ಕೆಯಾಗುವಂತಾಗಿದೆ ಎಂದರು.

ವೇದಿಕೆಯಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ನಗರಮಂಡಲ ಬಿಜೆಪಿ ಅಧ್ಯಕ್ಷ ಕೆ. ಜೀವಂಧರ ಜೈನ್, ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಹೇರಳೆ ಉಸ್ಥಿತರಿದ್ದರು.

ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಿ. ಶಂಭು ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News