ಇನ್ನೂ ದುರಸ್ತಿಯಾಗದ ಗಂಗೊಳ್ಳಿ ಜಟ್ಟಿ: ಮೀನುಗಾರರ ಆಕ್ರೋಶ

Update: 2019-05-24 14:48 GMT

ಗಂಗೊಳ್ಳಿ, ಮೇ 24: ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಕುಸಿದು ಏಳು ತಿಂಗಳು ಕಳೆದರೂ ಸಂಬಂಧ ಪಟ್ಟ ಇಲಾಖೆಯವರು ಈವರೆಗೆ ದುರಸ್ತಿ ಕಾರ್ಯ ನಡೆಸದೆ ನಿರ್ಲಕ್ಷ ವಹಿಸಿರುವ ಬಗ್ಗೆ ಸ್ಥಳೀಯ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ಅ.13ರಂದು ಗಂಗೊಳ್ಳಿ ಬಂದರಿನ ಎರಡನೆ ಹರಾಜು ಪ್ರಾಂಗಣದ ಸ್ಲ್ಯಾಬ್ ಕುಸಿದಿದ್ದು, ಮುಂದೆ ಡಿ.7ರಂದು ಮತ್ತೊಂದು ಕಡೆ ಕೂಡ ಸ್ಲ್ಯಾಬ್ ಕುಸಿತ ಕಂಡಿತ್ತು. ಪ್ರಮುಖ ಮೀನುಗಾರಿಕಾ ಬಂದರು ಆಗಿರುವ ಗಂಗೊಳ್ಳಿಯ ಈ ಸಮಸ್ಯೆಗೆ ಈವರೆಗೆ ಪರಿಹಾರ ಭಾಗ್ಯ ಕಂಡಿಲ್ಲ. ಅಧಿಕಾರಿ ಗಳು ವಿವಿಧ ಕಾರಣ ನೀಡಿ ದುರಸ್ತಿ ಕಾರ್ಯವ್ನು ಮುಂದೂಡುತ್ತಲೇ ಬಂದಿದ್ದಾರೆ.

ಎರಡು ಕಡೆಗಳಲ್ಲಿ ಸ್ಲ್ಯಾಬ್ ಕುಸಿದ ಪರಿಣಾಮ ಮೀನುಗಾರಿಕೆ ಮುಗಿಸಿ ವಾಪಾಸು ಬರುವ ಬೋಟುಗಳು ಹಾಗೂ ದೋಣಿಗಳಿಂದ ಬಂದರಿನಲ್ಲಿ ಮೀನುಗಳನ್ನು ಇಳಿಸಲು ಜಾಗದ ಕೊರತೆ ಕಾಡುತ್ತಿದೆ. ಇದರಿಂದ ನೂರಾರು ಮಂದಿ ನಾಡದೋಣಿ, ಬೋಟುಗಳ ಮೀನುಗಾರರಿಗೆ ತೊಂದರೆ ಯಾಗುತ್ತಿದೆ. ಅದನ್ನು ಮೀರಿ ಈ ಜಟ್ಟಿಯಲ್ಲೇ ಬೋಟಿನಿಂದ ಮೀನು ಇಳಿಸುವ ಕಾರ್ಯ ಮಾಡಿದರೆ ಮತ್ತಷ್ಟು ಜಟ್ಟಿ ಕುಸಿಯುವ ಸಾಧ್ಯತೆ ಇದೆ. ಅದೇ ರೀತಿ ಇಲ್ಲಿನ ಎರಡನೇ ಹರಾಜು ಪ್ರಾಂಗಣ್ಕೂ ಧಕ್ಕೆಯಾಗುವ ಭೀತಿ ಎದುರಾಗಿದೆ.

ಕಳೆದ ನವೆಂಬರ್‌ನಲ್ಲಿ ನಡೆದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಾಗೂ ಈ ಬಾರಿಯ ಲೋಕಸಭಾ ಚುನಾವಣಾ ಪ್ರಚಾರದ ಸಮಯ ರಾಜ್ಯ ಮೀನುಗಾರಿಕಾ ಸಚಿವ ವೆಂಕಟ ರಾವ್ ನಾಡಗೌಡ ಗಂಗೊಳ್ಳಿಗೆ ಭೇಟಿ ನೀಡಿದ್ದರು. ಈ ವೇಳೆ ಮೀನುಗಾರರ ನಿಯೋಗ ಈ ಕುರಿತಂತೆ ಎರಡು ಬಾರಿ ಸಚಿವರಿಗೆ ಮನವಿ ಸಲ್ಲಿಸಿತ್ತು. ಆದರೆ ಅವರು ಭರವಸೆ ನೀಡಿದ್ದಾರೆಯೇ ಹೊರತು ಈವರೆಗೆ ದುರಸ್ತಿ ಕಾರ್ಯಕ್ಕೆ ಸೂಚನೆ ನೀಡಿಲ್ಲ.

ಮೇ 23ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಟ್ಟಿ ದುರಸ್ತಿಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ. ಇದೀಗ ಚುನಾವಣೆ ಮುಗಿದಿದ್ದು, ಇನ್ನಾದರೂ ಕಾಮಗಾರಿಯನ್ನು ಶೀಘ್ರವೇ ಆರಂಭಿಸಿ ಮೀನುಗಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ಮೀನುಗಾರರರು ಒತ್ತಾಯಿಸಿದ್ದಾರೆ.

ಇನ್ನು ಕೆಲ ದಿನಗಳಲ್ಲೇ ಮಳೆಗಾಲ ಆರಂಭವಾಗಲಿದ್ದು, ಅದರ ನಂತರ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಈ ಮಧ್ಯೆ ಕಾಮಗಾರಿ ನಡೆಯುವ ಬಗ್ಗೆ ಮೀನುಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಕುಸಿದ ಜಟ್ಟಿ ದುರಸ್ತಿಯಾಗಲು ಇನ್ನೆಷ್ಟು ಸಮಯ ಕಾಯಬೇಕು ಎಂಬುದು ಮೀನುಗಾರರ ಯಕ್ಷ ಪ್ರಶ್ನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News