ಪ.ಬಂಗಾಳ: ಒಬ್ಬರನ್ನು ಬಿಟ್ಟು ಎಡರಂಗದ ಇತರ ಎಲ್ಲ ಅಭ್ಯರ್ಥಿ ಠೇವಣಿ ಜಪ್ತಿ

Update: 2019-05-24 14:55 GMT

ಹೊಸದಿಲ್ಲಿ,ಮೇ 24: ನಿರಂತರವಾಗಿ 34 ವರ್ಷಗಳ ಕಾಲ ಪಶ್ಚಿಮ ಬಂಗಾಳವನ್ನಾಳಿದ್ದ ಎಡರಂಗದ ಸ್ಥಿತಿ 2019ರ ಲೋಕಸಭಾ ಚುನಾವಣೆಗಳ ಬಳಿಕ ಅತ್ಯಂತ ಶೋಚನೀಯವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅದರ ಅಭ್ಯರ್ಥಿಗಳ ಪೈಕಿ ಬಿಕಾಶ ರಂಜನ್ ಭಟ್ಟಾಚಾರ್ಯ(ಜಾದವಪುರ) ಅವರನ್ನು ಹೊರತುಪಡಿಸಿ ಇತರ ಎಲ್ಲರೂ ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಸಂದರ್ಭ ಪಾವತಿಸುವ ಠೇವಣಿಯನ್ನು ಉಳಿಸಿಕೊಳ್ಳಲು ಅಭ್ಯರ್ಥಿ ಒಟ್ಟು ಚಲಾವಣೆಯಾದ ಮತಗಳ ಆರನೇ ಒಂದು ಪಾಲು ಅಥವಾ ಶೇ.16.6ರಷ್ಟು ಮತಗಳನ್ನು ಪಡೆಯುವುದು ಅಗತ್ಯವಾಗಿದೆ. ಶೇ.21.04ರಷ್ಟು ಮತಗಳನ್ನು ಪಡೆದಿರುವ ಭಟ್ಟಾಚಾರ್ಯರನ್ನು ಬಿಟ್ಟರೆ ಎಡರಂಗದ ಯಾವುದೇ ಅಭ್ಯರ್ಥಿಗೆ ಶೇ.16.6ಷ್ಟು ಮತಗಳನ್ನು ಗಳಿಸಲು ಸಾಧ್ಯವಾಗಿಲ್ಲ.

ಭಾರತದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ 25,000 ರೂ.ಗಳ ಭದ್ರತಾ ಠೇವಣಿಯನ್ನು ಸಲ್ಲಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭ್ಯರ್ಥಿಗಳಿಗೆ ಈ ಮೊತ್ತವು ಅನುಕ್ರಮವಾಗಿ 12,500 ರೂ. ಮತ್ತು 5,000 ರೂ.ಆಗಿದೆ.

1977ರಿಂದ 2011ರವರೆಗೆ ನಿರಂತರವಾಗಿ ಪ.ಬಂಗಾಳವನ್ನು ಆಳಿದ ಎಡರಂಗದ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಎಡರಂಗದ ಅಭ್ಯರ್ಥಿಗಳಿಗೆ ಎರಡಂಕಿಗಳ ಶೇಕಡಾವಾರು ಮತಗಳನ್ನು ಪಡೆಯಲೂ ಸಾಧ್ಯವಾಗಿಲ್ಲ.

ಕಳೆದ 60 ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಈ ಬಾರಿ ಎಡರಂಗದ ಅತ್ಯಂತ ಕಳಪೆ ಸಾಧನೆ ದಾಖಲಾಗಿದ್ದು, ಕೇರಳದಲ್ಲಿ ಒಂದು ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಯೊಂದಿಗೆ ನಾಲ್ಕು ಸ್ಥಾನಗಳನ್ನು ಪಡೆದು ಗೆದ್ದಿದ್ದೇ ಅದರ ಭಾಗ್ಯವಾಗಿದೆ.

1952ರ ನಂತರ ಇದೇ ಮೊದಲ ಬಾರಿಗೆ ಲೋಕಸಭೆಯಲ್ಲಿ ಎಡರಂಗದ ಸದಸ್ಯರ ಸಂಖ್ಯೆ ಎರಡಂಕಿಗಳನ್ನೂ ತಲುಪಿಲ್ಲ. 2014ರಲ್ಲಿ ಕೇವಲ 12 ಸಂಸದರನ್ನು ಹೊಂದಿದ್ದು ಅದರ ಈವರೆಗಿನ ಅತ್ಯಂತ ಕಳಪೆ ಸಾಧನೆಯಾಗಿತ್ತು. 2009ರಲ್ಲಿ 24 ಸ್ಥಾನಗಳನ್ನು ಹೊಂದಿದ್ದ ಎಡರಂಗವು 2004ರಲ್ಲಿ ತನ್ನ ಗರಿಷ್ಠ ಗಳಿಕೆ(59)ಯನ್ನು ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News