ಮೌಂಟ್ ಎವರೆಸ್ಟ್ ನಲ್ಲೂ ಜನಜಂಗುಳಿ!

Update: 2019-05-24 15:23 GMT

ಕಠ್ಮಂಡು (ನೇಪಾಳ), ಮೇ 24: ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್‌ನಲ್ಲಿ ಇನ್ನೂ ಮೂವರು ಭಾರತೀಯ ಆರೋಹಿಗಳು ಮೃತರಾಗಿದ್ದು, ಒಂದೇ ವಾರದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ ಎಂದು ಆರೋಹಣ ಸಂಘಟಕರು ಮತ್ತು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರಾಗಿದ್ದಾರೆ.

ಇದರೊಂದಿಗೆ ಈ ಬಾರಿಯ ಆರೋಹಣ ಋತುವಿನಲ್ಲಿ ಮೃತಪಟ್ಟವರ ಹಾಗೂ ನಾಪತ್ತೆಯಾದವರ ಸಂಖ್ಯೆ 15ಕ್ಕೇರಿದೆ.

ಈ ಬಾರಿ ನೇಪಾಳ ದಾಖಲೆಯ 381 ಪರ್ಮಿಟ್‌ಗಳನ್ನು ಆರೋಹಿಗಳಿಗೆ ನೀಡಿದ್ದು, ಎವರೆಸ್ಟ್ ಜನಜಂಗುಳಿಯಿಂದ ಕೂಡಿದೆ. ಜನಜಂಗುಳಿಯಿಂದಾಗಿ ಆರೋಹಿಗಳ ಸುಗಮ ಚಲನವಲನಗಳಿಗೆ ತಡೆಯಾಗುತ್ತಿದ್ದು ಅವರು ಬಳಲಿಕೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ನೇಪಾಳವು ಎವರೆಸ್ಟ್ ಆರೋಹಣದ ಪ್ರತಿ ಪರ್ಮಿಟ್‌ಗೆ 11,000 ಡಾಲರ್ (ಸುಮಾರು 7.65 ಲಕ್ಷ ರೂಪಾಯಿ) ಶುಲ್ಕ ವಿಧಿಸುತ್ತಿದೆ. ಕೆಟ್ಟ ಹವಾಮಾನದಿಂದಾಗಿ ಆರೋಹಣ ದಿನಗಳನ್ನು ಕಡಿತಗೊಳಿಸಿದ ಬಳಿಕ, ಎವರೆಸ್ಟ್ ದಾರಿಯುದ್ದಕ್ಕೂ ಜನರೇ ತುಂಬಿದ್ದಾರೆ.

‘‘ಇನ್ನೂ ಇಬ್ಬರು ಭಾರತೀಯ ಆರೋಹಿಗಳು ಎವರೆಸ್ಟ್‌ನಲ್ಲಿ ನಿನ್ನೆ ಮೃತಪಟ್ಟಿದ್ದಾರೆ’’ ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆಯ ವಕ್ತಾರೆ ಮೀರಾ ಆಚಾರ್ಯ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಇನ್ನೊಂದು ಸಾವನ್ನು ಸಂಘಟಕರು ಖಚಿತಪಡಿಸಿದ್ದಾರೆ.

ಪುಣೆಯ ನಿಹಾಲ್ ಭಗವಾನ್, ಮುಂಬೈಯ ಅಂಜಲಿ ಶರದ್ ಕುಲಕರ್ಣಿ ಮತ್ತು ಮತ್ತು ಒಡಿಶಾದ ಕಲ್ಪನಾ ದಾಸ್ ಮೃತಪಟ್ಟವರು.

49 ವರ್ಷದ ಕಲ್ಪನಾ ದಾಸ್ ಎವರೆಸ್ಟ್ ಶೃಂಗವನ್ನು ತಲುಪಿದರು, ಆದರೆ ಇಳಿಯುವಾಗ ಗುರುವಾರ ಅಪರಾಹ್ನ ಮೃತಪಟ್ಟರು.

ಇನ್ನೋರ್ವ ಭಾರತೀಯ ಆರೋಹಿ 27 ವರ್ಷದ ನಿಹಾಲ್ ಭಗವಾನ್ ಶಿಖರ ಏರಿ ಇಳಿಯುತ್ತಿರುವಾಗ ಮೃತಪಟ್ಟರು.

ಜನಜಂಗುಳಿಯಲ್ಲಿ ಸಿಲುಕಿ ಬಳಲಿ ಸಾಯುವ ಆರೋಹಿಗಳು

‘‘ಆರೋಹಿ ನಿಹಾಲ್ ಭಗವಾನ್ ಎವರೆಸ್ಟ್ ಶಿಖರದಿಂದ ಇಳಿಯುತ್ತಿರುವಾಗ 12 ಗಂಟೆಗೂ ಹೆಚ್ಚು ಕಾಲ ಜನಜಂಗುಳಿಯಲ್ಲಿ ಸಿಲುಕಿದರು ಹಾಗೂ ತೀರಾ ಬಳಲಿದರು. ಶೆರ್ಪಾ ಗೈಡ್‌ಗಳು ಅವರನ್ನು ಹೊತ್ತುಕೊಂಡು ಶಿಬಿರ ಸಂಖ್ಯೆ 4ಕ್ಕೆ ಕರೆತಂದರು. ಆದರೆ, ಅವರು ಅಲ್ಲೇ ಕೊನೆಯುಸಿರೆಳೆದರು’’ ಎಂದು ಪೀಕ್ ಪ್ರೊಮೋಶನ್ ಸಂಸ್ಥೆಯ ಕೇಶವ ಪೌದೆಲ್ ಹೇಳಿದರು.

ಗುರುವಾರ 120ಕ್ಕೂ ಅಧಿಕ ಮಂದಿ ಶಿಖರವನ್ನು ಏರಿದರು. ಆದರೆ, ಕೆಲವರು ಇಳಿಯುವಾಗ ಭಾರೀ ಜನಜಂಗುಳಿಯಿಂದಾಗಿ ತೀರಾ ವಿಳಂಬವಾಯಿತು. ಬಳಲಿಕೆ ಮತ್ತು ದೇಹದಲ್ಲಿ ನೀರಿನ ಅಂಶದ ಕೊರತೆಯಿಂದಾಗಿ ಅವರು ಮೃತಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News