ಬಜೆ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆ: ವಾರಕ್ಕೆ ಬೇಕಾಗುವಷ್ಟು ನೀರು

Update: 2019-05-24 15:46 GMT

ಉಡುಪಿ, ಮೇ 24: ಉಡುಪಿ ನಗರಸಭೆಗೆ ನೀರು ಪೂರೈಸುವ ಸ್ವರ್ಣಾ ನದಿಯ ಬಜೆ ಡ್ಯಾಂನಲ್ಲಿ ನೀರಿನ ಮಟ್ಟ ತೀವ್ರವಾಗಿ ಇಳಿಕೆಯಾಗಿದ್ದು, ಈಗ ಕೇವಲ ಒಂದು ವಾರಕ್ಕೇ ಆಗುವಷ್ಟು ಮಾತ್ರ ನೀರಿನ ಸಂಗ್ರಹ ಇದೆ.

ಮೇ 5ರಂದು ಬಜೆ ಡ್ಯಾಂನಲ್ಲಿ ನೀರು ಖಾಲಿಯಾಗಿ ಮೇ 7ರಿಂದ ಸ್ವರ್ಣಾ ನದಿಯ ಏಳು ಕಿ.ಮೀ. ದೂರದ ಮಾಣೈಯಿಂದ ಡ್ರೆಡ್ಜಿಂಗ್ ಮೂಲಕ ನೀರು ಹಾಯಿಸಿ ಭಂಡಾರಿಬೆಟ್ಟು, ಅಲ್ಲಿಂದ ಪುತ್ತಿಗೆ ಮಠ ಅಲ್ಲಿಂದ ಡ್ಯಾಂನ ಜಾಕ್ ವೆಲ್‌ಗೆ ಹರಿದು ಬರುವಂತೆ ಮಾಡಲಾಗಿತ್ತು.

ಅದರ ನಂತರ ನಗರಸಭೆಯನ್ನು ಆರು ವಿಭಾಗಗಳಾಗಿ ವಿಂಗಡಿಸಿ ಆರು ದಿನಗಳಿ ಗೊಮ್ಮೆ ನೀರು ಪೂರೈಕೆ ಮಾಡಲಾಯಿತು. ಕೆಲ ದಿನಗಳ ಹಿಂದೆ ಮಾಣೈಯಲ್ಲಿ ನೀರು ಸಂಗ್ರಹ ಖಾಲಿಯಾದ ಹಿನ್ನೆಲೆಯಲ್ಲಿ ಅಲ್ಲಿನ ಡ್ರೆಡ್ಜಿಂಗ್ ನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಭಂಡಾರಿಬೆಟ್ಟುವಿನಲ್ಲೂ ನೀರು ಖಾಲಿ ಯಾಗಿದ್ದು, ಸದ್ಯ ಡ್ಯಾಂನಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಪುತ್ತಿಗೆ ಮಠದ ಬಳಿಯಿಂದ ಮಾತ್ರ ಡ್ರೆಡ್ಜಿಂಗ್ ಮಾಡಲಾಗುತ್ತಿದೆ.

ಇಲ್ಲಿಂದ ನೀರು ಜಾಕ್‌ವೆಲ್‌ಗೆ ಹರಿದು ಬರುತ್ತಿದ್ದು, ಪ್ರತಿದಿನ 14 ಗಂಟೆ ಗಳ ಪಂಪಿಂಗ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿದೆ. ಇಂದು ಮಧ್ಯಾಹ್ನ 2ಗಂಟೆಯಿಂದ ಸಂಜೆ 5.30ರವರೆಗೆ ಹಾಗೂ 6.30ರಿಂದ ರಾತ್ರಿಯ ವರೆಗೂ ನೀರು ಪಂಪಿಂಗ್ ಮಾಡಲಾಗುತ್ತಿದೆ. ಸದ್ಯ ಬಜೆಯಲ್ಲಿ ಕೇವಲ ಒಂದು ವಾರಗಳಿಗೆ ಆಗುವಷ್ಟ ಮಾತ್ರ ನೀರಿನ ಸಂಗ್ರಹ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ನಿಗದಿತ ವಿಭಾಗಕ್ಕೆ ನಗರಸಭೆಯಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲಾಗಿದ್ದು, ನೀರು ಬಾರದ ಕುಂಜಿಬೆಟ್ಟು, ಕಡಿಯಾಳಿ-2ಕ್ಕೆ ಟ್ಯಾಂಕರ್ ಮೂಲಕ ಮೂರು ಟ್ರಿಪ್‌ಗಳಲ್ಲಿ 5ಸಾವಿರ ಲೀಟರ್, ಕಕ್ಕುಂಜೆಗೆ ಒಂದು ಟ್ರಿಪ್‌ನಲ್ಲಿ 12ಲೀಟರ್, ಕಕ್ಕುಂಜೆ-2ಕ್ಕೆ ಎರಡು ಟ್ರಿಪ್‌ನಲ್ಲಿ 12ಸಾವಿರ ಲೀಟರ್, ನಿಟ್ಟೂರಿಗೆ ಮೂರು ಟ್ರಿಪ್‌ನಲ್ಲಿ 10ಸಾವಿರ ಲೀಟರ್ ಹಾಗೂ ಕರಂಬಳ್ಳಿಗೆ ಒಂದು ಟ್ರಿಪ್‌ನಲ್ಲಿ 12ಸಾವಿರ ಲೀಟರ್ ನೀರು ಪೂರೈಸಲಾಗಿದೆ.

ಮಳೆಗಾಗಿ ಪ್ರಾರ್ಥನೆ

ಲಕ್ನೋ ರಾಯಬರೆಲಿ ಮದ್ರಸದ ಉಪಪ್ರಾಂಶುಪಾಲ ಮೌಲಾನಾ ಅಬ್ದುಸ್ಸುಭಾನ್ ಸಾಹಬ್ ನದ್ವಿ ಮದನಿ ನೇತೃತ್ವದಲ್ಲಿ ಮೇ 24ರಂದು ಬೆಳಗ್ಗೆ 6.30 ಗಂಟೆಗೆ ಗಂಗೊಳ್ಳಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮಳೆಗಾಗಿ ವಿಶೇಷ ಪಾರ್ಥನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News