ಎಣಿಕಾ ಕೇಂದ್ರದಿಂದ ಜಿಲ್ಲಾಧಿಕಾರಿ ಕಚೇರಿಗೆ ಮತಯಂತ್ರಗಳ ರವಾನೆ

Update: 2019-05-24 15:50 GMT

ಉಡುಪಿ, ಮೇ 23: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯು ಮೇ 23ರ ಸಂಜೆ ವೇಳೆ ಮುಗಿದ ಹಿನ್ನೆಲೆಯಲ್ಲಿ ಮತ ಎಣಿಕಾ ಕೇಂದ್ರದಿಂದ ಆಯಾ ಜಿಲ್ಲೆಗಳ ಮತಯಂತ್ರಗಳನ್ನು ರವಾನಿಸುವ ಕಾಯರ್ ಇಂದು ಬೆಳಗ್ಗೆಯಿಂದ ನಡೆಯಿತು.

ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿ ಕುಮಾರ್ ಮತಯಂತ್ರಗಳ ವಿಲೇವಾರಿ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆ ಗಳ ಸಹಾಯ ಚುನಾವಣಾಧಿಕಾರಿಗಳು ಹಾಜರಿದ್ದರು.

ಮತ ಎಣಿಕಾ ಕೇಂದ್ರವಾಗಿರುವ ಬ್ರಹ್ಮಗಿರಿ ಸೈಂಟ್ ಸಿಸಿಲಿಸ್ ಶಾಲೆಯ ಆವರಣದಲ್ಲಿ ಪೊಲೀಸ್ ಭದ್ರತೆ ಮುಂದುವರೆದಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗ್ಗೆ ಚಿಕ್ಕಮಗಳೂರು ಜಿಲ್ಲೆಯ ಮತಯಂತ್ರಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯ ಸ್ಟ್ರಾಂಗ್ ರೂಂಗೆ ಕೊಂಡೊಯ್ಯಲಾಯಿತು.

ಅದೇ ರೀತಿ ಉಡುಪಿ ಜಿಲ್ಲೆಯ ಮತಯಂತ್ರಗಳನ್ನು ಕೇಂದ್ರದಿಂದ ಮಧ್ಯಾಹ್ನ ವೇಳೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಮಣಿಪಾಲದಲ್ಲಿರುವ ಜಿಲ್ಲಾಧಿ ಕಾರಿ ಕಚೇರಿಗೆ ಸಾಗಿಸಲಾಯಿತು. ಅಲ್ಲಿನ ಸ್ಟ್ರಾಂಗ್ ರೂಂನಲ್ಲಿ ಅವುಗಳನ್ನು ಇರಿಸಿ ಸೀಲ್ ಮಾಡಲಾಯಿತು. ಮತ ಎಣಿಕಾ ಕೇಂದ್ರದಲ್ಲಿನ ಎಲ್ಲ ಕಾರ್ಯಗಳನ್ನು ಮುಗಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಪತ್ರಿಕೆಗೆ ತಿಳಿಸಿದ್ದಾರೆ.

‘ಮತ ಎಣಿಕೆ ಪ್ರಕ್ರಿಯೆಯು ಮೇ 23ರಂದು ಸಂಜೆ 7ಗಂಟೆಗೆ ಸಂಪೂರ್ಣ ಗೊಂಡಿದ್ದು, ವಿಜೇತ ಅಭ್ಯರ್ಥಿಗೆ ಪ್ರಮಾಣಪತ್ರವನ್ನು ಅದೇ ವೇಳೆ ನೀಡ ಲಾಗಿತ್ತು. ಆದರೆ ನಾನು ಸೇರಿದಂತೆ ಎಲ್ಲ ಅಧಿಕಾರಿಗಳು ರಾತ್ರಿ 11ಗಂಟೆಯ ವರೆಗೂ ಕೇಂದ್ರದಲ್ಲಿ ಕೆಲಸ ನಿರ್ವಹಿಸಿದ್ದೇವು. ಮತ್ತೆ ಇಂದು ಬೆಳಗ್ಗೆ ಮತಯಂತ್ರ ಗಳನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಸ್ಟ್ರಾಂಗ್‌ರೂಂನಲ್ಲಿ ಸೀಲ್ ಮಾಡಲಾಯಿತು. ಸಂಜೆ ವೇಳೆ ಮತ ಎಣಿಕೆ ಕೇಂದ್ರವನ್ನು ಶಾಲಾ ಆಡಳಿತ ಮಂಡಳಿಗೆ ಬಿಟ್ಟುಕೊಡಲಾಗಿದ್ದು, ಭದ್ರತೆಯನ್ನು ವಾಪಾಸ್ಸು ಪಡೆಯಲಾಗಿದೆ.

-ಹೆಫ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News