ಆಯಷ್ಮಾನ್ ಯೋಜನೆಯ ಮೂಲಕ ಪ್ರಾಣ ಉಳಿಸಿದ ಪ್ರಧಾನಿಗೆ ಕೃತಜ್ಞತೆ: ಸೆಲೂನ್ ಮಾಲಕನಿಂದ ಉಚಿತ ಸೇವೆ

Update: 2019-05-24 16:32 GMT

ಪುತ್ತೂರು: ಆಯುಷ್ಮಾನ್ ಯೋಜನೆಯ ಮೂಲಕ ತನ್ನ ಜೀವ ಉಳಿಸಿದ್ದ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಒಂದು ದಿನದ ಕೆಲಸವನ್ನು ಉಚಿತವಾಗಿ ಮಾಡುತ್ತೇನೆ ಎಂದು ಘೋಷಿಸಿಕೊಂಡಿದ್ದ ಸೆಲೂನ್ ಅಂಗಡಿಯವರೊಬ್ಬರು ಶುಕ್ರವಾರ ತನ್ನ ಸೆಲೂನ್ ನಲ್ಲಿ ಉಚಿತ ಹೇರ್ ಕಟ್ಟಿಂಗ್ ಮತ್ತು ಶೇವಿಂಗ್ ಸೇವೆ ನೀಡುವ ಮೂಲಕ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 

ಪುತ್ತೂರು ತಾಲೂಕಿನ ಸಂಟ್ಯಾರು ಎಂಬಲ್ಲಿ 'ಸುಮುಖ ಹೇರ್ ಡ್ರೆಸಸ್' ಅಂಗಡಿ ಹೊಂದಿರುವ ಬಾಲಸುಂದರ್ ಅವರು ಉಚಿತ ಹೇರ್ ಕಟ್ಟಿಂಗ್ ಮತ್ತು ಶೇವಿಂಗ್ ಸೇವೆ ನೀಡಿದವರು.

ಬಾಲಸುಂದರ್ ಅವರು ಮೂಲತಃ ತಮಿಳುನಾಡಿನವರು. ಸಂಟ್ಯಾರಿನಲ್ಲಿ ಕಳೆದ 15 ವರ್ಷಗಳಿಂದ ಸೆಲೂನ್ ಅಂಗಡಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಹೃದಯಾಘಾತಕ್ಕೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಅವರಿಗೆ ಚಿಕಿತ್ಸೆ ಮುಂದುವರಿಸಲು ಆರ್ಥಿಕ ಸಮಸ್ಯೆ ಎದುರಾಗಿತ್ತು. ಆ ಸಂದರ್ಭದಲ್ಲಿ ಸ್ಥಳೀಯರೊಬ್ಬರು ಆಸ್ಪತ್ರೆಯ ವೆಚ್ಚ ಭರಿಸಿ ಅವರನ್ನು ಬಿಡುಗಡೆಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಆಯುಷ್ಮಾನ್ ಯೋಜನೆಯಡಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸುವ ವ್ಯವಸ್ಥೆ ಮಾಡಿದ್ದರು. ಯಶಸ್ವೀ ಶಸ್ತ್ರಚಿಕಿತ್ಸೆಯ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದರು.

ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ನನ್ನ ಕೈಯಲ್ಲಿ ಕೇವಲ ರೂ.1 ಸಾವಿರ ಮಾತ್ರವಿತ್ತು. ಆಸ್ಪತ್ರೆಯ ಬಿಲ್ ರೂ.55 ಸಾವಿರ ಆಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾಗಲು ನನ್ನಲ್ಲಿ ಹಣವಿರಲಿಲ್ಲ. ಆ ಸಂದರ್ಭದಲ್ಲಿ ನಾನು ಸಂತೋಷ್ ರೈ ಕೈಕಾರ ಎಂಬವರಿಗೆ ವಿಷಯ ತಿಳಿಸಿ ಸಹಕಾರ ಕೋರಿದ್ದೆ. ಅವರು ತನ್ನ ಸಹೋದರರನ್ನು ಕಳಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಆಯುಷ್ಮಾನ್ ಯೋಜನೆಯಡಿ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸುವ ವ್ಯವಸ್ಥೆ ಮಾಡಿಸಿದ್ದರು. ಅದರಿಂದಾಗಿ ನಾನು ಬದುಕಿಕೊಂಡೆ ಎಂದು ಬಾಲಸುಂದರ್ ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರ ಆಯುಷ್ಮಾನ್ ಯೋಜನೆಯಿಂದಾಗಿ ಅದೆಷ್ಟೋ ಮಂದಿ ನನ್ನಂತಹ ಬಡವರ ಜೀವ ಉಳಿಯುತ್ತಿದೆ. ಮೋದಿ ಅವರು ದೇಶದ ಜನತೆಗಾಗಿ ಇಷ್ಟೊಂದು ಸೇವೆಗಳನ್ನು ನೀಡುತ್ತಿರುವಾಗ ನಾನು ಒಂದು ದಿನವಾದರೂ ತನ್ನಿಂದಾದ ಸೇವೆ ಮಾಡಬೇಕೆಂದು ತೀರ್ಮಾನಿಸಿದ್ದೆ.

ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಒಂದು ದಿನದ ದುಡಿಮೆಯನ್ನು ಸೇವಾರ್ಥ ಮಾಡುವುದಾಗಿ ದೇವರಲ್ಲಿ ಪ್ರಾರ್ಥಿಸಿ ಕೊಂಡಿದ್ದೆ .ಈಗ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದು, ಈ ಸೇವೆ ನನ್ನ ಸಂಭ್ರಮಾಚರಣೆಯೂ ಹೌದು ಎಂದು ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News