ಪೆನ್ಸಿಲ್ ಉದ್ಯಮದ ಹೆಸರಿನಲ್ಲಿ ವಂಚನೆ: ಸ್ಥಳೀಯರಿಂದ ದಿಗ್ಬಂಧನ

Update: 2019-05-24 16:51 GMT

ಪುತ್ತೂರು : ಪೆನ್ಸಿಲ್ ತಯಾರಿಕಾ ಉದ್ಯಮದ ಹೆಸರಿನಲ್ಲಿ ವಂಚನೆ ನಡೆಸಿದ ಆರೋಪದಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರನ್ನು ಕೂಡಿಹಾಕಿ ದಿಗ್ಬಂಧನ ವಿಧಿಸಿದ ಘಟನೆ ಶುಕ್ರವಾರ ಪುತ್ತೂರು ತಾಲೂಕಿನ ಕಬಕ ಎಂಬಲ್ಲಿ ನಡೆಯಿತು.

ಕೇರಳ ಮೂಲದ ಮನುಚಂದ್ರನ್ ಎಂಬವರು ಕಬಕ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಪೆನ್ಸಿಲ್ ತಯಾರಿ ಉದ್ಯಮ ಆರಂಭಿಸಿದ್ದರು. ಈ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕರು ರೂ. 80 ಸಾವಿರ ಮೌಲ್ಯದ ಮೆಷಿನ್ ವೆಚ್ಚವನ್ನು ಭರಿಸಬೇಕಾಗಿತ್ತು. ಮೆಷಿನ್ ಪಡೆದು ಕೊಂಡವರಿಗೆ ಪೆನ್ಸಿಲ್ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಸಂಸ್ಥೆಯ ವತಿಯಿಂದಲೇ ನೀಡಲಾಗುತ್ತಿತ್ತು. ತಯಾರಿಸಿದ ಉತ್ಪನ್ನಗಳಿಗೆ ಮಜೂರಿ ನೀಡಿ ಅವರೇ ಖರೀದಿಸುತ್ತಿದ್ದರು.

ಆರಂಭದಲ್ಲಿ ಚೆನ್ನಾಗಿ ಪೆನ್ಸಿಲ್ ತಯಾರಿಕಾ ಕಾರ್ಮಿಕರಿಗೆ ಹಣ ನೀಡುತ್ತಾ ಬಂದಿದ್ದ ಮನುಚಂದ್ರ ಅವರು ಇತ್ತೀಚಿನ ಕೆಲವು ತಿಂಗಳಿಂದ ಅಸಮರ್ಪಕ ಕಾರಣಗಳನ್ನು ನೀಡಿ ನಾಪತ್ತೆಯಾಗಿದ್ದು, ಇದೊಂದು ವಂಚನೆ ಎಂದು ಆರೋಪಿಸಿ ಸ್ಥಳೀಯರು ಕಬಕಕ್ಕೆ ಬಂದಿದ್ದ ಮನುಚಂದ್ರ ಅವರನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ದಿಗ್ಬಂಧನ ವಿಧಿಸಿದ್ದರು ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಅರಿತು ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ತೆರಳಿ ಗೊಂದಲಕ್ಕೆ ತಾತ್ಕಾಲಿಕವಾಗಿ ತೆರೆ ಎಳೆದು, ಇತ್ತಂಡದವರನ್ನು ಪುತ್ತೂರು ನಗರ ಠಾಣೆಗೆ ವಿಚಾರಣೆಗಾಗಿ ಬರುವಂತೆ ಸೂಚಿಸಿ ಸಮಸ್ಯೆಯನ್ನು ಪರಿಹರಿಸಿದರು. 

ಮಾಧ್ಯಮ ಚಿತ್ರೀಕರಣಕ್ಕೆ ಎಸ್‍ಐ ಅಡ್ಡಿ:

ಘಟನೆಯ ಕುರಿತು ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ವರದಿ ಸಂಗ್ರಹಿಸಲು ಸ್ಥಳಕ್ಕೆ ತೆರಳಿ ವಿವಾದದ ದೃಶ್ಯವನ್ನು ಚಿತ್ರೀಕರಣ ಮಾಡಿದ್ದ ಮಾಧ್ಯಮ ವರದಿಗಾರರೊಬ್ಬರ ಮೊಬೈಲನ್ನು ಪುತ್ತೂರು ನಗರ ಠಾಣೆಯ ಪ್ರೊಬೆಷನರಿ ಎಸ್‍ಐ ರಾಜಕುಮಾರ್ ಎಂಬವರು ಪಡೆದುಕೊಂಡು ಚಿತ್ರೀಕರಣ ಮಾಡಿದ್ದ ದೃಶ್ಯಾವಳಿಗಳನ್ನು ಡಿಲೀಡ್ ಮಾಡಿರುವುದು ಮೊತ್ತೊಂದು ಗೊಂದಲಕ್ಕೆ ಕಾರಣವಾಯಿತು. 

ಈ ಘಟನೆಯ ಕುರಿತು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ಶುಕ್ರವಾರ ಸಂಜೆ ನಗರ ಠಾಣೆಗೆ ತೆರಳಿ ಪ್ರೊಬೆಷನರಿ ಎಸ್‍ಐ ಅವರ ಕ್ರಮದ ವಿರುದ್ದ ದೂರು ನೀಡಿದರು. ಪುತ್ತೂರು ನಗರ ಠಾಣೆಯ ಇನ್ಸ್‍ಪೆಕ್ಟರ್ ಶಶಿಕುಮಾರ್ ಅವರ ಸಮ್ಮುಖದಲ್ಲಿ ನಡೆದ ಮಾತುಕತೆಯ ವೇಳೆ ಪ್ರೊಬೆಷನರಿ ಎಸ್‍ಐ ತಪ್ಪೊಪ್ಪಿಕೊಂಡ ಹಿನ್ನಲೆಯಲ್ಲಿ ಪ್ರಕರಣ ಮುಗಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News