ಮಂಗಳೂರು: ಉರ್ವ ಚರ್ಚ್ ಬಳಿ ಯುವಕನಿಗೆ ಚೂರಿ ಇರಿತ
Update: 2019-05-24 22:54 IST
ಮಂಗಳೂರು, ಮೇ 24: ನಗರದ ಉರ್ವ ಚರ್ಚ್ ಬಳಿ ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿ ಯುವಕರಿಬ್ಬರ ನಡುವೆ ಜಗಳವಾಗಿದ್ದು, ಒಬ್ಬಾತ ಇನ್ನೊಬ್ಬ ಯುವಕನಿಗೆ ಚೂರಿಯಿಂದ ಇರಿದ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ರಿತೇಶ್ (23) ಎಂಬಾತ ಇರಿತದಿಂದ ಗಾಯಗೊಂಡ ಯುವಕ.
ವಿಕ್ಕಿ ಎಂಬಾತ ಆತನಿಗೆ ಇರಿದು ಪರಾರಿಯಾಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ಯದ ಅಮಲಿನಲ್ಲಿ ಆರಂಭವಾದ ಜಗಳದಿಂದ ಘಟನೆ ನಡೆದಿದೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.