ಕುವೈತ್ ನಲ್ಲಿ ಕರಾವಳಿಗರು ಸೇರಿ 200ಕ್ಕೂ ಅಧಿಕ ಭಾರತೀಯರು ಅತಂತ್ರ

Update: 2019-05-24 17:42 GMT

ಮಂಗಳೂರು: ಉದ್ಯೋಗ ನಿಮಿತ್ತ ದ.ಕ. ಜಿಲ್ಲೆಯಿಂದ ಕುವೈತ್ ಗೆ ತೆರಳಿದ್ದ ಕರಾವಳಿಯ 35 ಮಂದಿ ಯುವಕರು ಸೇರಿದಂತೆ 200ಕ್ಕೂ ಅಧಿಕ ಮಂದಿ ಭಾರತೀಯರು ಅತಂತ್ರರಾಗಿದ್ದು, ತಮಗೆ ಸಹಾಯ ಮಾಡುವಂತೆ ಶಾಸಕರು, ನಾಗರಿಕರಲ್ಲಿ ಮನವಿ ಮಾಡುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವೀಡಿಯೊದಲ್ಲಿ ಯುವಕರು ಕುವೈತ್ ನಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ವೀಡಿಯೊದಲ್ಲಿ ಗಣೇಶ್ ಎಂಬವರು ಮಾತನಾಡಿ, ‘ನಗರದ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಲಕ ಪ್ರಸಾದ್ ಶೆಟ್ಟಿ ಎಂಬವರಿಗೆ 65 ಸಾವಿರ ರೂ. ನೀಡಿ ಜ.7ರಂದು ಕುವೈತ್ ಗೆ ಬಂದಿದ್ದೇವೆ. ಇಲ್ಲಿ ಬಂದ ಬಳಿಕ ಅತಂತ್ರರಾಗಿದ್ದೇವೆ’ ಎಂದು ಹೇಳಿದ್ದಾರೆ.

‘ಮಂಗಳೂರಿನಿಂದ ಬರುವಾಗ ಕುವೈತ್ ನ ಕ್ಯಾಂಬ್ರಿಡ್ಜ್ ಎನ್ನುವ ಕಂಪೆನಿಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಕುವೈತ್ ಗೆ ಬಂದ ಬಳಿಕ ಬೇರೆ ಕಂಪನಿಯಲ್ಲಿ ಕೆಲಸ ಕೊಡಿಸಿದ್ದಾರೆ. ಆ ಕಂಪನಿಯಲ್ಲಿ 5 ತಿಂಗಳಿನಿಂದ ದುಡಿಯುತ್ತಿದ್ದು, ಈತನಕ ಬಿಡಿಕಾಸು ಸಂಬಳವನ್ನೂ ನೀಡಿಲ್ಲ. ಇದರಿಂದ ನಾವು ತೀರಾ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಇದು ಮಾತ್ರವಲ್ಲದೆ ಈಗ ಊಟದ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದ್ದು, ಆಹಾರಕ್ಕಾಗಿ ನಾವು ಭಿಕ್ಷೆ ಬೇಡು ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಯುವಕರು ಅಲವತ್ತುಕೊಂಡಿದ್ದಾರೆ.

‘ನಾವು ಸಂಕಷ್ಟಕ್ಕೆ ಸಿಲುಕಿದ ಬಳಿಕ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕ ಮಾಡಿದ್ದು, ಅಲ್ಲಿಂದ ಯಾವುದೇ ಪೂರಕ ಸ್ಪಂದನೆ ಸಿಕ್ಕಿಲ್ಲ. ನಾವು ಬಡವರಾಗಿದ್ದು, ಮಂಗಳೂರಿನ ಮಾಧ್ಯಮದವರು, ರಾಜಕೀಯ ಪ್ರತಿನಿಧಿಗಳು, ಶಾಸಕ ವೇದವ್ಯಾಸ ಕಾಮತ್ ಸಹಾಯ ಮಾಡಬೇಕು. ನಾವು ಮರಳಿ ಊರಿಗೆ ಬರಲು ನಿರ್ಧರಿಸಿದ್ದು, ನಮ್ಮನ್ನು ಊರಿಗೆ ಕರೆಸಿಕೊಳ್ಳಿ’ ಎಂದು ಸಹಾಯ ಕೇಳಿದ್ದಾರೆ.

ಮಂಗಳೂರಿನಿಂದ ಕುವೈತ್ ಗೆ ಹೋದ ತಂಡದಲ್ಲಿ ತುಂಬಾ ಮಂದಿ ರಮಝಾನ್ ಉಪವಾಸದಲ್ಲಿದ್ದು, ಸಂಬಳವಾಗದೆ ಸಂಕಷ್ಟದಲ್ಲಿದ್ದಾರೆ ಎಂದು ವೀಡಿಯೊದಲ್ಲಿ ಹೇಳಿದ್ದಾರೆ.

200ಕ್ಕೂ ಅಧಿಕ ಮಂದಿ: ಮಂಗಳೂರಿನ 35 ಮಂದಿ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಭಾರತದ 200ಕ್ಕೂ ಅಧಿಕ ಮಂದಿ ಇದ್ದಾರೆ. ಎಲ್ಲರದ್ದೂ ಇದೇ ಪರಿಸ್ಥಿತಿ ಎಂದು ವೀಡಿಯೊದಲ್ಲಿ ತಿಳಿಸಿದ್ದಾರೆ.

ಯುವಕರನ್ನು ಕರೆತರುವುದು ನನ್ನ ಜವಾಬ್ದಾರಿ: ಶಾಸಕ ವೇದವ್ಯಾಸ ಕಾಮತ್

ದ.ಕ. ಜಿಲ್ಲೆಯ 35 ಯುವಕರು ಕುವೈತ್‌ನಲ್ಲಿ ಕೆಲಸಕ್ಕಾಗಿ ತೆರಳಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಯುವಕರ ಹೇಳಿಕೆಯ ವೀಡಿಯೊ ವೈರಲ್‌ ಆಗಿದೆ. ಈ ವೀಡಿಯೊ ನನಗೆ ತಲುಪಿದ್ದು, ಸಂಪೂರ್ಣ ನೆರವು ನೀಡಲಿದ್ದೇನೆ. ಕುವೈತ್‌ನಲ್ಲಿ ತನ್ನ ಹಿತೈಷಿ ರಾಜ್ ಭಂಡಾರಿ ಜತೆ ಈಗಾಗಲೇ ಮಾತನಾಡಿದ್ದೇವೆ. ಸಂತ್ರಸ್ತ ಯುವಕರೊಂದಿಗೆ ಸಂಪರ್ಕಿಸಲು ಸೂಚಿಸಿದ್ದೇನೆ. ಯುವಕರನ್ನು ಮಂಗಳೂರಿಗೆ ಕರೆತರಲು ಶ್ರಮಿಸಲಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಯುವಕರ ಪಾಸ್‌ಪೋರ್ಟ್‌ನ ಪ್ರತಿಗಳನ್ನು ವಾಟ್ಸ್‌ಆ್ಯಪ್ ಮೂಲಕ ತರಿಸಿಕೊಂಡು ಭಾರತ ಸರಕಾರಕ್ಕೆ ರವಾನಿಸಲಿದ್ದೇನೆ. ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ ನ್ಯಾಯ ಒದಗಿಸಲಿದ್ದೇನೆ. ಸಂತ್ರಸ್ತ ಯುವಕರಿಗೆ ಊಟೋಪಹಾರದ ವ್ಯವಸ್ಥೆ ಕಲ್ಪಿಸಲಾಗುವುದು. ಸಂಸದ ನಳಿನ್‌ ಕುಮಾರ್ ಕಟೀಲ್ ಸಹಕಾರ ಪಡೆದುಕೊಂಡು ಮುನ್ನಡೆಯಲಿದ್ದೇನೆ. ಸಂತ್ರಸ್ತರ ಕುಟುಂಬದವರು ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News