ಸಿಇಟಿ: ಇಂಜಿನಿಯರಿಂಗ್‌ನಲ್ಲಿ ಚಿನ್ಮಯ್‌ಗೆ 2ನೆ ರ್ಯಾಂಕ್

Update: 2019-05-25 08:35 GMT

ಮಂಗಳೂರು, ಮೇ 25: ಸಿಇಟಿ ಪರೀಕ್ಷೆಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ 2ನೆ ರ್ಯಾಂಕ್ ಗಳಿಸಿರುವ ಚಿನ್ಮಯ್‌ಗೆ ಬಾಲ್ಯದಿಂದಲೂ ವಿಜ್ಞಾನಿಯಾಗಬೇಕೆಂಬ ಬಯಕೆ. ಇದೀಗ ಐಐಟಿ ಮದ್ರಾಸ್‌ನಲ್ಲಿ ಇಂಜಿನಿಯರಿಂಗ್ ಅಥವಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕ್ಸ್‌ನಲ್ಲಿ ಸಂಶೋಧನೆ ಮಾಡುವ ಬಯಕೆಯನ್ನೂ ಚಿನ್ಮಯ್ ಹೊಂದಿದ್ದಾರೆ.

ವಳಚ್ಚಿಲ್‌ನ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ವಿಜ್ಞಾನ (ಪಿಸಿಎಂಸಿ) ವಿದ್ಯಾಭ್ಯಾಸ ಮಾಡಿ ಸಿಇಟಿ ಪರೀಕ್ಷೆಯನ್ನು ಎದುರಿಸಿ 2ನೆ ರ್ಯಾಂಕ್ ಪಡೆದಿರುವ ಚಿನ್ಮಯ್‌ಗೆ ಮೊದಲ 10ರೊಳಗೆ ರ್ಯಾಂಕ್ ಪಡೆಯುವ ನಿರೀಕ್ಷೆ ಇತ್ತಾದರೂ 2ನೆ ರ್ಯಾಂಕ್ ಬಂದಿರುವುದು ತುಂಬಾ ಖುಷಿ ತಂದಿದೆ ಎಂದಿದ್ದಾರೆ.

ಕರ್ನಾಟಕ ರಾಜ್ಯ ಬೀಜ ನಿಗಮ ಬಳ್ಳಾರಿಯಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿರುವ ರವಿಶಂಕರ್ ಹಾಗೂ ಗೃಹಿಣಿ ಸುಧಾ ರವಿಶಂಕರ್‌ರವರ ಪುತ್ರನಾಗಿರುವ ಚಿನ್ಮಯ್, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 577 ಅಂಕಗಳನ್ನು ಪಡೆದಿದ್ದರು. (ಭೌತಶಾಸ್ತ್ರ, ರಸಾಯನಶಾಸ್ತ್ರ, ಕಂಪ್ಯೂಟರ್‌ವಿಜ್ಞಾನದಲ್ಲಿ ತಲಾ 100 ಅಂಕಗಳು, ಗಣಿತದಲ್ಲಿ 99 ಅಂಕಗಳು, ಕನ್ನಡ 92 ಹಾಗೂ ಇಂಗ್ಲಿಷ್‌ನಲ್ಲಿ 86 ಅಂಕಗಳು).

ಮೂಲತ ಮೈಸೂರು ಜಿಲ್ಲೆಯವರಾಗಿರುವ ಚಿನ್ಮಯ್, ಪೋಷಕರು ಪ್ರಸ್ತುತ ಬಳ್ಳಾರಿಯಲ್ಲಿ ನೆಲೆಸಿದ್ದಾರೆ ಚಿನ್ಮಯ್ ಕಳೆದ ಎರಡು ವರ್ಷಗಳಿಂದ ಹಾಸ್ಟೆಲ್‌ನಲ್ಲಿದ್ದು ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ಪಿಯು ಶಿಕ್ಷಣ ಪೂರೈಸಿದ್ದಾರೆ. ಬಳ್ಳಾರಿಯ ಡ್ರೀಮ್ ವಲ್ಡ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಶಿಕ್ಷಣ ಪಡೆದಿರುವ ಚಿನ್ಮಯ್‌ಗೆ ಕ್ರಿಕೆಟ್ ಆಟವೆಂದರೆ ತುಂಬಾ ಇಷ್ಟವಂತೆ. ಹಿರಿಯ ಸಹೋದರ ಅಕ್ಷಯ್ ಕುಮಾರ್ ವೈದ್ಯಕೀಯ ಶಿಕ್ಷಣ (ಎಂಡಿ) ಪಡೆಯುತ್ತಿದ್ದಾರೆ ಎಂದು ಚಿನ್ಮಯ್ ಮಾಹಿತಿ ನೀಡಿದರು.

ಪೈಲೆಟ್ ಆಗುವ ಕನಸು- ಇಂಜಿನಿಯರಿಂಗ್ ಮುಂದಿನ ಗುರಿ: ಸಮರ್ಥ್

ಇಂಜಿನಿಯರಿಂಗ್‌ನಲ್ಲಿ 5ನೆ ರ್ಯಾಂಕ್ ಪಡೆದಿರುವ ಸಮರ್ಥ್ ಕನಸು ಪೈಲಟ್ ಆಗಬೇಕೆಂಬುದು. ಆದರೆ ಸದ್ಯ ಐಐಟಿಯಲ್ಲಿ ಇಂಜಿನಿಯರಿಂಗ್ ಮಾಡುವ ಗುರಿ.

ಮೂಲತ: ಮಂಗಳೂರಿನ ಉದ್ಯಮಿ ಸತೀಶ್ ಹಾಗೂ ಶ್ರೀರಾಧಾ ದಂಪತಿಯ ಪುತ್ರ ಸಮರ್ಥ್ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪೂರ್ತಿಗೊಳಿಸಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ 572 ಅಂಕಗಳನ್ನು ಇವರು ಪಡೆದಿದ್ದರು.

‘‘ಪೈಲಟ್ ಆಗಬೇಕೆಂಬುದು ನನ್ನ ಕನಸು. ಇತರ ಕೆಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿದ್ದೇನೆ. ದ್ವಿತೀಯ ಪಿಯುಸಿ ಬಳಿಕ ದಿನದ ಸುಮಾರು 14 ಗಂಟೆ ಓದಿಗಾಗಿ ಮೀಸಲಿಡುತ್ತಿದ್ದೇ. ಕಠಿಣ ಪರಿಶ್ರಮ ಪಟ್ಟಿದ್ದೇನೆ. ಸಿಇಟಿಯಲ್ಲಿ 20ರೊಳಗಿನ ರ್ಯಾಂಕ್ ಬರುವ ಅಂದಾಜಿತ್ತು. ಆದರೆ 5ನೆ ರ್ಯಾಂಕ್ ದೊರಕಿರುವುದು ಸಂತಸವಾಗಿದೆ’’ ಎಂದು ಸಮರ್ಥ್ ಸಂತಸ ಹಂಚಿಕೊಂಡಿದ್ದಾರೆ.

ಕೃಷಿಯಲ್ಲಿ ರ್ಯಾಂಕ್ ಪಡೆದರೂ ವೈದ್ಯನಾಗುವ ಗುರಿ: ಭುವನ್ ವಿ.ಬಿ.

ಬಿಎಸ್ಸಿ (ಅಗ್ರಿಕಲ್ಚರ್)ಯಲ್ಲಿ 2ನೆ ರ್ಯಾಂಕ್ ಹಾಗೂ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸ್‌ನಲ್ಲಿ 6ನೆ ರ್ಯಾಂಕ್ ಪಡೆದಿರುವ ಭುವನ್ ವಿ.ಬಿ.ಗೆ ವೈದ್ಯನಾಗುವ ಗುರಿಯನ್ನು ಹೊಂದಿದ್ದಾರೆ.

‘‘ನೀಟ್ ಪರೀಕ್ಷೆಗಾಗಿ ಕಾಯುತ್ತಿದ್ದು, ಮೆಡಿಕಲ್ ಕ್ಷೇತ್ರವನ್ನು ಆಯ್ದುಕೊಳ್ಳಬೇಕೆಂದು ನಿರ್ಧರಿಸಿದ್ದೇನೆ. ಮೂಲತ: ಬೆಂಗಳೂರಿನವರಾಗಿರುವ ನಾನು ಕಳೆದ ಎರಡು ವರ್ಷಗಳಿಂದ ಹಾಸ್ಟೆಲ್‌ನಲ್ಲಿದ್ದುಕೊಂಡು ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ. ಮೊದಲ 10ರೊಳಗೆ ರ್ಯಾಂಕ್ ಬರುವ ನಿರೀಕ್ಷೆ ಹೊಂದಿದ್ದೆ ಎಂದು ’’ ಭುವನ್ ಅಭಿಪ್ರಾಯಿಸಿದ್ದಾರೆ.

ವೈದ್ಯ ದಂಪತಿಯಾಗಿರುವ ಡಾ. ಬಿ.ಎಂ. ವೀರೇಗೌಡ ಹಾಗೂ ಡಾ. ಲೀನಾ ಗೌಡರ (ಇವರಿಬ್ಬರೂ ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್‌ಗಳು) ಪುತ್ರನಾಗಿರುವ ಭುವನ್‌ ಪಿಯುಸಿಯಲ್ಲಿ ವಿಜ್ಞಾನ (ಪಿಸಿಎಂಬಿ)ದಲ್ಲಿ 591 ಅಂಕಗಳನ್ನು ಪಡೆದಿದ್ದರು. ಭೌತಶಾಸ್ತ್ರ, ಗಣಿತ, ಸಂಸ್ಕೃತ ವಿಷಯಗಳಲ್ಲಿ ತಲಾ 100 ಅಂಕಗಳನ್ನು ಇವರು ಪಡೆದಿದ್ದಾರೆ.

ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ಸಂಭ್ರಮಾಚರಣೆ

ಸಿಇಟಿ ಪರೀಕ್ಷೆಯ ವಿವಿಧ ವಿಭಾಗಗಳಲ್ಲಿ ನಗರದ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಆರು ವಿದ್ಯಾರ್ಥಿಗಳು 8 ರ್ಯಾಂಕ್‌ಗಳನ್ನು ಪಡೆದಿದ್ದಾರೆ.

ನಗರದ ಕೊಡಿಯಾಲ್‌ಬೈಲ್‌ನ ಕಾಲೇಜು ಆವರಣದಲ್ಲಿ ಇಂದು ಇಂಜಿನಿಯರಿಂಗ್‌ನಲ್ಲಿ ದ್ವಿತೀಯ ಹಾಗೂ ಫಾರ್ಮಸಿಯಲ್ಲಿ 3ನೆ ರ್ಯಾಂಕ್ ಪಡೆದಿರುವ ಆರ್. ಚಿನ್ಮಯ್, ಇಂಜಿನಿಯರಿಂಗ್‌ನಲ್ಲಿ 5ನೆ ರ್ಯಾಂಕ್ ಪಡೆದಿರುವ ಸಮರ್ಥ್, ಬಿಎಸ್ಸಿ (ಅಗ್ರಿಕಲ್ಚರ್)ಯಲ್ಲಿ 2ನೆ ರ್ಯಾಂಕ್ ಹಾಗೂ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸ್‌ನಲ್ಲಿ 6ನೆ ರ್ಯಾಂಕ್ ಪಡೆದಿರುವ ಭುನ್ ವಿ.ಬಿ. ಅವರನ್ನು ಸಂಸ್ಥೆಯ ಮುಖ್ಯಸ್ಥರಾದ ನರೇಂದ್ರ ನಾಯಕ್, ಉಷಾ ನಾಯಕ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸುವ ಮೂಲಕ ಸಂಭ್ರಮಾಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News