ಬಿಜೆಪಿಯ ಧಾರ್ಮಿಕ ಧ್ರುವೀಕರಣದಿಂದ ಕಾಂಗ್ರೆಸ್‌ಗೆ ಸೋಲು: ಐವನ್ ಡಿಸೋಜಾ

Update: 2019-05-25 11:36 GMT

ಮಂಗಳೂರು, ಮೇ 25: ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯ ಮಾತ್ರವಲ್ಲದೆ ದೇಶದಲ್ಲೆಡೆ ಮತದಾರರನ್ನು ಅಭಿವೃದ್ಧಿಯ ಹೊರತಾಗಿ ಧಾರ್ಮಿಕ ಧ್ರುವೀಕರಣದ ಮೂಲಕ ಸೆಳೆಯುವಲ್ಲಿ ಬಿಜೆಪಿ ಸಫಲವಾದ ಕಾರಣ ಕಾಂಗ್ರೆಸ್ ಸೋಲು ಅನುಭವಿಸಬೇಕಾಗಿದೆ. ಚುನಾವಣೆ ಫಲಿತಾಂಶ ತೃಪ್ತಿ ತಂದಿಲ್ಲವಾದರೂ ಜನರ ತೀರ್ಪಿಗೆ ತಲೆಬಾಗುತ್ತೇವೆ ಎಂದು ವಿಧಾನ ಪರಿಷತ್‌ನ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆಲುವಿಗಾಗಿ ಸಾಕಷ್ಟು ಪ್ರಯತ್ನ ಮಾಡಿದರೂ ಯಶಸ್ಸು ದೊರಕಿಲ್ಲ ಎಂದರು.

ಕೇಂದ್ರದಲ್ಲಿನ ಅಧಿಕಾರದ ಜತೆಗೆ ಮಾಧ್ಯಮಗಳ ಸಹಕಾರವೂ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಲಭಿಸಿದ ಕಾರಣದಿಂದ ಧಾರ್ಮಿಕ ಧ್ರುವೀಕರಣವು ಅಭಿವೃದ್ಧಿ ಯನ್ನು ಮೀರಿಸಿ ಮತದಾರರನ್ನು ಆಕರ್ಷಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಘೋಷಣೆಯಾದ ನಂತರ ಭಾಗವಹಿಸಿದ 142 ರ್ಯಾಲಿಗಳಲ್ಲಿಯೂ ಅಚ್ಚೇದಿನ್ ಬರುವ ಬಗ್ಗೆ ಮಾತೇ ಆಡಿಲ್ಲ. ಬದಲಾಗಿ ವಾಯುದಾಳಿ, ಉಗ್ರರ ದಾಳಿಯ ವಿಚಾರಗಳನ್ನು ಎತ್ತಿ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಭಾವನಾತ್ಮಕವಾಗಿ ಮತದಾರರನ್ನು ಆಕರ್ಷಿಸುವಲ್ಲಿ ಸಫಲರಾಗಿದ್ದಾರೆ. 70 ವರ್ಷಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಯಾವುದೇ ಪಕ್ಷದ ಆಡಳಿತ ಮಾಡಿರದ ದೇಶದ ಸೇನೆಯ ಸಾಧನೆಯನ್ನು ಪಕ್ಷದ ಸಾಧನೆಯೆಂದು ಬಿಂಬಿಸಿದ ಕಾರಣ ಭಾವನಾತ್ಮಕವಾಗಿ ಜನರನ್ನು ಸೆಳೆಯಲಾಗಿದೆ. ಅಭಿವೃದ್ದಿಯನ್ನು ಕಡೆಗಣಿಸಿ ದೇಶದ ರಕ್ಷಣೆ ಮತ್ತು ಭದ್ರತೆ ವಿಚಾರದಲ್ಲಿ ಹೆಚ್ಚು ಪ್ರಚಾರ ನೀಡಿ ಮತ ಸೆಳೆಯಲಾಗಿದೆ. ವಾಯು ದಾಳಿಯ ಕುರಿತಂತೆ ಅದರ ಮುಖ್ಯಸ್ಥರು ಹೇಳಿಕೆ ನೀಡಬೇಕಾಗಿದ್ದನ್ನು ಪ್ರಧಾನ ಮಂತ್ರಿ, ಸಚಿವರೇ ಹೇಳಿಕೊಂಡು ಜನರನ್ನು ಭಾವನಾತ್ಮಕವಾಗಿ ಸೆಳೆಯಲಾಗಿದೆ. ಬಿಜೆಪಿ ಪಡೆದಿರುವ 303 ಮೂರು ಸ್ಥಾನಗಳಲ್ಲಿ ಹೆಚ್ಚಾಗಿ ಧಾರ್ಮಿಕವಾಗಿ ಕೆಲಸ ಮಾಡಿದವರೇ ಸಂಸದರಾಗಿ ಆಯ್ಕೆ ಆಗಿದ್ದು, ಇದು ದೇಶಕ್ಕೆ ಹಿತಕಾರಿಯಲ್ಲ ಎಂದು ಐವನ್ ಡಿಸೋಜಾ ಹೇಳಿದರು.

ರಾಜ್ಯದಲ್ಲಿ ನಾಯಕತ್ವ ಸಮರ್ಥವಾಗಿದೆ. ರಾಜ್ಯಕ್ಕೆ ಲೋಕಸಭೆಯ ಫಲಿತಾಂಶ ಅನ್ವಯ ಆಗದು. ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಮತೀಯ ಧ್ರುವೀಕರಣ ನಡೆದಿದೆ. ಇದರಿಂದ ಪಕ್ಷಕ್ಕೆ ತೊಂದರೆ ಆಗಿದೆ ಎಂಬುದು ನನ್ನ ಭಾವನೆ. ಯುವ ಮತದಾರರು ಕೂಡಾ ಬೆಂಬಲ ನೀಡಿಲ್ಲ ಎಂಬ ಅನಿಸಿಕೆ ಇದೆ. ಕಾಂಗ್ರೆಸ್‌ಗೆ ಬೀಳಬೇಕಾದ ಸಾಂಪ್ರದಾಯಿಕ ಮತಗಳು ದೊರಕಿವೆ. ಆದರೆ ಮತದಾನದ ಸಂದರ್ಭದಲ್ಲಿಯೇ ನಿರ್ಧಾರ ಮಾಡುವಂತಹ ಮತದಾರರ ಒಲವು ಪಕ್ಷಕ್ಕೆ ದೊರಕಿಲ್ಲ. ದೇಶಕ್ಕೆ ಸಂಬಂಧಿಸಿ ಮೋದಿ ಆಡಳಿತ ಬೇಕೆಂಬ ನಿರ್ಧಾರದೊಂದಿಗೆ ಜನ ಬೆಂಬಲ ನೀಡಿದ್ದಾರೆ ಎಂದವರು ಹೇಳಿದರು.

ಗೋಷ್ಠಿಯಲ್ಲಿ ನಾಗೇಂದ್ರ ಕುಮಾರ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

ಮೈತ್ರಿ ಸರಕಾರ ಸುಭದ್ರ
ರಾಜ್ಯದಲ್ಲಿ ಮೈತ್ರಿ ಸರಕಾರ ಸುಭದ್ರವಾಗಿದೆ. ಸರಕಾರ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದ ಬಿಜೆಪಿ ನಾನಾ ರೀತಿಯ ತಂತ್ರಗಳನ್ನು ನಡೆಸಿ ಸರಕಾರ ಉರುಳಿಸುವ ಕನಸು ಕಾಣುತ್ತಿದೆ. ಆದರೆ ಶಾಸಕರೆಲ್ಲರೂ ಒಟ್ಟಾಗಿದ್ದೇವೆ. ಐದು ವರ್ಷಗಳ ಕಾಲ ಸರಕಾರ ನಡೆಯಲಿದೆ ಎಂದು ಐವನ್ ಡಿಸೋಜಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News