ಲಾರಿ, ಟಿಪ್ಪರ್ ಗಳಲ್ಲಿ ಕಾರ್ಮಿಕರನ್ನು ಸಾಗಾಟ ಮಾಡಬೇಡಿ: ಇನ್ಸ್ ಪೆಕ್ಟರ್ ಸೂಚನೆ

Update: 2019-05-25 11:45 GMT

ಪುತ್ತೂರು: ಕಟ್ಟಡ ನಿರ್ಮಾಣ ಗುತ್ತಿಗೆದಾರರು ತಮ್ಮ ಕಾರ್ಮಿಕರನ್ನು ಸರಕು ಸಾಗಾಟ ವಾಹನಗಳಾದ ಲಾರಿ, ಟಿಪ್ಪರ್‍ಗಳಲ್ಲಿ ಕರೆದೊಯ್ಯಬಾರದು. ಲಾರಿಯ ಕ್ಯಾಬಿನ್‍ನಲ್ಲಿ ಕುಳಿತುಕೊಂಡು ಪ್ರಯಾಣಿಸಲು ಅನುಮತಿ ಇರುವ ಸಂಖ್ಯೆಯಷ್ಟೇ ಜನರು ಪ್ರಯಾಣ ಮಾಡಬೇಕು. ಇಂತಹ ಪ್ರಕರಣ ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ನಗರ ಪೊಲೀಸ್ ಇನ್‍ಸ್ಪೆಕ್ಟರ್ ಶಶಿಕುಮಾರ್ ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.

ಅವರು ಶನಿವಾರ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪುತ್ತೂರು ನಗರ ಮತ್ತು ಸಂಚಾರ ಪೊಲೀಸ್ ಠಾಣೆಯಿಂದ ಹಮ್ಮಿಕೊಳ್ಳಲಾದ ಪೊಲೀಸ್ ಜಾಗೃತಿ ಅಭಿಯಾನ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದರು.

ಸರಕು ಸಾಗಾಟ ಮಾಡುವ ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನು ಅಥವಾ ಇತರ ಪ್ರಯಾಣಿಕರನ್ನು ಸಾಗಾಟ ಮಾಡುವ ಮೂಲಕ ಯಾವುದೇ ಅಪಾಯದ ಸನ್ನಿವೇಶಕ್ಕೆ ಗುತ್ತಿಗೆದಾರರು ಕಾರಣವಾಗಬಾರದು. ಯಾವುದೇ ಕಾರಣಕ್ಕೂ ಲಾರಿಗಳ ಅಥವಾ ಟಿಪ್ಪರ್‍ಗಳ ಬಾಡಿಗಳಲ್ಲಿ ಸಾಗಾಟ ಮಾಡಬಾರದು ಎಂದು ಸೂಚಿಸಿದ ಅವರು ಕಟ್ಟಡ ನಿರ್ಮಾಣ ಗುತ್ತಿಗೆದಾರರು ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಾಟ ನಡೆಸುತ್ತಿರುವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರನ್ನು ಅಥವಾ ಜನರನ್ನು ಸಾಗಾಟ ಮಾಡುವುದು ಪರವಾನಿಗೆ ನಿಯಮಕ್ಕೆ ವಿರುದ್ಧವಾಗಿದೆ. ಕಾರ್ಮಿಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಾಟ ಮಾಡಲು ಇತರ ವಾಹನಗಳನ್ನು ಬಳಕೆ ಮಾಡಬೇಕು. ಸರಕು ಸಾಗಾಟ ವಾಹನಗಳಲ್ಲಿ ಜನರನ್ನು ಸಾಗಾಟ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಪುತ್ತೂರು ನಗರದ ಪ್ರಮುಖ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪುತ್ತೂರು ಸಂಚಾರ ಪೊಲೀಸ್ ಠಾಣಾ ಸಬ್ ಇನ್‍ಸ್ಪೆಕ್ಟರ್ ಮಹಾಬಲ ಶೆಟ್ಟಿ ಉಪಸ್ಥಿತರಿದ್ದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಸಭೆ

ಇದೇ ಸಂದರ್ಭದಲ್ಲಿ ಪುತ್ತೂರಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆಯನ್ನು ನಡೆಸಲಾಯಿತು. ಖಾಸಗಿ ಶಾಲಾ ಬಸ್‍ಗಳು ಸುಸ್ಥಿತಿಯಲ್ಲಿರಬೇಕು. ಮಿತಿ ಮೀರಿದ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸಾಗಾಟ ಮಾಡಬಾರದು. ಅಲ್ಲದೇ ಖಾಸಗಿ ಟೂರಿಸ್ಟ್ ವಾಹನಗಳು ಶಾಲೆಗೆ ಮಕ್ಕಳನ್ನು ಕರೆ ತರುವ ಸಂದರ್ಭದಲ್ಲೂ ಮಿತಿ ಮೀರಿದ ಸಂಖ್ಯೆಯಲ್ಲಿ ಮಕ್ಕಳನ್ನು ಸಾಗಾಟ ಮಾಡಬಾರದು. ಈ ಕುರಿತು ಖಾಸಗಿ ವಾಹನಗಳ ಮಾಲಿಕರಿಗೆ ಸೂಚನೆ ನೀಡುವಂತೆ ಪುತ್ತೂರು ನಗರ ಪೊಲೀಸ್ ಇನ್‍ಸ್ಪೆಕ್ಟರ್ ಶಶಿಕುಮಾರ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News