ಸರಕಾರಿ ಎಲ್‍ಕೆಜಿ, ಯುಕೆಜಿ ಸ್ಥಾಪನೆಗೆ ಖಂಡನೆ: ಮೇ 30ರಂದು ವಿಧಾನ ಸೌಧ ಚಲೋ ಹೋರಾಟ - ಬಿ.ಎಂ.ಭಟ್

Update: 2019-05-25 11:52 GMT

ಪುತ್ತೂರು: ಅಂಗನವಾಡಿಗಳ ಬಲವರ್ದನೆ ಹಾಗೂ ಅಂಗನವಾಡಿಗಳನ್ನು ಪೂರ್ವ ಶಿಕ್ಷಣ ಕೇಂದ್ರವನ್ನಾಗಿ ಮಾಡಬೇಕಾಗಿದ್ದು, ಪ್ರಾಥಮಿಕ ಶಿಕ್ಷಣವನ್ನೂ ವ್ಯಾಪಾರಿ ದಂಧೆಯಾಗಿಸಲು ಮುಂದಾಗುತ್ತಿರುವ ಸರ್ಕಾರದ ಧೋರಣೆಯನ್ನು ವಿರೋಧಿಸಿ ಉಗ್ರ ಹೋರಾಟ ನಡೆಸಲಾಗುವುದು. ಸರಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ, ಯುಕೆಜಿ ಸ್ಥಾಪಿಸಲು ನಿರ್ಧರಿಸುತ್ತಿರುವುದನ್ನು ಖಂಡಿಸಿ ಮೇ 30 ರಂದು ವಿಧಾನಸೌಧ ಚಲೋ ಹೋರಾಟ ನಡೆಸಲಾಗುವುದು ಎಂದು ಕ.ಜಿಲ್ಲಾಅಂಗನವಾಡಿ ನೌಕರರ ಸಂಘಟನೆಯ ಮುಖಂಡರಾದ ನ್ಯಾಯವಾದಿ ಬಿ.ಎಂ.ಭಟ್ ಅವರು ಪುತ್ತೂರಲ್ಲಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಂಗನವಾಡಿಗಳಲ್ಲಿ ಸರಕಾರವೇಎಲ್.ಕೆ.ಜಿ, ಯುಕೆಜಿ ಸ್ಥಾಪಿಸುವುದರಿಂದ ಪ್ರಾಥಮಿಕ ಶಿಕ್ಷಣವನ್ನೂ ವ್ಯಾಪರೀಕರಣವಾಗಿಸುವ ದಂಧೆಯನ್ನು ತಡೆದು ಹೆತ್ತವರು ಬಯಸುವ ಉತ್ತಮ ಶಿಕ್ಷಣ ಬಡ ಮಕ್ಕಳಿಗೂ ಸರಕಾರವೇ ನೀಡಿದಂತಾಗುತ್ತದೆ ಹಾಗೂ ಖಾಸಗೀಕರಣದ ಭೂತದಿಂದ ಬಡಜನತೆಯನ್ನು ರಕ್ಷಿಸಿದಂತಾಗುತ್ತದೆ. ಸರಕಾರೀ ಶಾಲೆಗಳಲ್ಲಿ ಎಲ್.ಕೆ.ಜಿ, ಯುಕೆಜಿ ಶಿಕ್ಷಣ ನೀಡಲು ಸರಕಾರ ನಿರ್ಧರಿಸುತ್ತಿರುವ ಹಿನ್ನೆಲೆಯಲ್ಲಿ ಮೇ ತಿಂಗಳ ಮೊದಲ ವಾರವೇ ಬಿ.ಎಂ.ಭಟ್ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನ ಮುಖಂಡರಾದ ಲಕ್ಷ್ಮಿ, ಮೂಕಾಂಬಿಕೆ, ವಸಂತಿ, ಹೇಮಾವತಿ ಬೆಳ್ತಂಗಡಿಯ ಲಲಿತ, ಜಯಂತಿ, ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ನೀಡಿ ಈ ಎಲ್.ಕೆ.ಜಿ., ಯುಕೆಜಿಗಳನ್ನು ಸರಕಾರೀ ಶಾಲೆಗಳಲ್ಲಿ ಪ್ರಾರಂಭಿಸುವ ಬದಲು ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಬಿಸಿ ಅಂಗನವಾಡಿಗಳನ್ನೂ ಉಳಿಸಿ ಎಲ್.ಕೆ.ಜಿ, ಯುಕೆಜಿ ಶಿಕ್ಷಣವೂ ಬಡ ಮಕ್ಕಳಿಗೆ ಸಿಗುವಂತೆ ಮಾಡಲು ಒತ್ತಾಯಿಸಲಾಗಿತ್ತು.

ಬೆಳ್ತಂಗಡಿಯ ಮಾಜಿ ಶಾಸಕರಾದ ಕೆ ವಸಂತ ಬಂಗೇರ ಅವರ ಮೂಲಕ ಮುಖ್ಯಮಂತ್ರಿಗಳ ಗಮನವನ್ನೂ ಸೆಳೆಯಲಾಗಿತ್ತು. ಆದರೆ ಸರಕಾರ ಈ ಬಗ್ಗೆ ಯಾವ ಸ್ಪಂದನೆಯನ್ನೂ ನೀಡದೆ ಸರಕಾರಿ ಶಾಲೆಗಳಲ್ಲಿಯೇ ಎಲ್.ಕೆ.ಜಿ, ಯುಕೆಜಿ ಸ್ಥಾಪಿಸಲು ನಿರ್ಧರಿಸುತ್ತಿರುವುದನ್ನು ಖಂಡಿಸಿ ಮೇ 30 ರಂದು ವಿಧಾನಸೌಧ ಚಲೋ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದರಲ್ಲೂ ನ್ಯಾಯ ಸಿಗದೇ ಇದ್ದಲ್ಲಿ ಜಿಲ್ಲಾ ಕೇಂದ್ರದಲ್ಲಿ ಅನಿರ್ಧಿಷ್ಟ ಹೋರಾಟ ನಡೆಸಲಾಗುವುದು ಎಂದು ಅವರು ಸರಕಾರವನ್ನು ಎಚ್ಚರಿಸಿದ್ದು, ಈ ಹೋರಾಟವನ್ನು ಅಂಗನವಾಡಿ ನೌಕರರು, ಸಾರ್ವಜನಿಕರು ಬೆಂಬಲಿಸಿ ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದು ಕರೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News