ನರೇಂದ್ರ ಮೋದಿ ಕೊಟ್ಟ ಭರವಸೆ ಈಡೇರಿಸಲಿ: ಸಚಿವ ಖಾದರ್

Update: 2019-05-25 13:08 GMT

ಮಂಗಳೂರು, ಮೇ 25: ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹಲವು ಭರವಸೆಗಳನ್ನು ನೀಡಿದ್ದು, ಎರಡನೆ ಬಾರಿಗೆ ಅಧಿಕಾರದ ಗದ್ದುಗೆಗೆ ಏರಲಿರುವ ಅವರು ಈ ಹಿಂದೆ ನೀಡಿರುವ ಭರಸವೆಗಳನ್ನು ಈಡೇರಿಸಲಿ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ವಾಪಸ್ ತರಲಿ, ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡಲಿ, ಅಡುಗೆ ಅನಿಲ ದರ ಮತ್ತು ಡೀಸೆಲ್-ಪೆಟ್ರೋಲ್ ದರ ಇಳಿಸಲಿ, ದೇಶದ ಆರ್ಥಿಕ ಸ್ಥಿತಿಯನ್ನು ಸುವ್ಯವಸ್ಥಿಯಗೊಳಿಸಲಿ, ನಿರುದ್ಯೋಗ ಸಮಸ್ಯೆ ನಿವಾರಿಸಲಿ, ಯುವಕರು ವಿದೇಶಕ್ಕೆ ಹಾರಿ ಸಮಸ್ಯೆಗೆ ಸಿಲುಕುವುದನ್ನು ತಪ್ಪಿಸಲಿ, ಪುಲ್ವಾಮದಂತಹ ಘಟನೆ ಇನ್ನೆಂದೂ ಆಗದಿರಲಿ, ದೇಶದ ಸೈನಿಕರನ್ನು ರಕ್ಷಿಸಲು ಮುಂದಾಗಲಿ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯ ಗೆಲುವಿಗೆ ನಾವೆಲ್ಲಾ ಶ್ರಮಿಸಿದ್ದೆವು. ಆದರೆ, ಅನಿರೀಕ್ಷಿತ ಫಲಿತಾಂಶ ಬಂದಿದೆ. ಮತದಾರರ ತೀರ್ಪನ್ನು ನಾವು ಗೌರವಿಸುತ್ತೇವೆ. ಸೋಲು ಯಾರಿಗೂ ಶಾಶ್ವತವಲ್ಲ. ಕತ್ತಲಾದ ಮೇಲೆ ಬೆಳಕು ಇದ್ದೇ ಇದೆ. ಪ್ರಜಾಪ್ರಭುತ್ವ ಉಳಿಸುವ ಮತ್ತು ಸಂವಿಧಾನ ರಕ್ಷಿಸಲು ಕಾಂಗ್ರೆಸ್ ಮುಂದೆಯೂ ಕಟಿಬದ್ಧವಾಗಿದೆ ಎಂದ ಸಚಿವ ಖಾದರ್, ಮೂರನೇ ಬಾರಿಗೆ ಗೆದ್ದ ನಳಿನ್ ಕುಮಾರ್ ಕಟೀಲ್‌ಗೆ ಅಭಿನಂದನೆ. ನೂತನ ಸಂಪುಟದಲ್ಲಿ ಅವರು ಸಚಿವರಾಗಲಿ ಎಂದು ಹಾರೈಸಿದರು.

ವಾರ್ಡ್‌ಗೆ ಒಂದರಂತೆ ಟ್ಯಾಂಕರ್ ಪೂರೈಕೆ: ಜಿಲ್ಲೆಯ ಅದರಲ್ಲೂ ನಗರದ ನೀರಿನ ಸಮಸ್ಯೆಯನ್ನು ಜಿಲ್ಲಾಡಳಿತ ಬಗೆಹರಿಸುತ್ತಿವೆ. ರೇಶನಿಂಗ್ ಪದ್ಧತಿ ಜಾರಿಗೊಳಿಸಿದ ಕಾರಣ ಮಳೆ ಬಾರದಿದ್ದರೂ ಕೂಡ ಜನರ ಸಹಕಾರದಿಂದ ಸಮಸ್ಯೆಯನ್ನು ಭಾಗಶಃ ನಿವಾರಿಸಲಾಗಿದೆ. ಈಗಾಗಲೆ 25 ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತದೆ. ಹೆಚ್ಚುವರಿ 30 ಟ್ಯಾಂಕರ್‌ಗಳನ್ನು ನೀರು ಸರಬರಾಜಿಗೆ ನೀಡಲಾಗುವುದು. ಕಾರ್ಪೊರೇಟ್ ಕಂಪೆನಿಗಳಿಂದ ಹೆಚ್ಚುವರಿ ಟ್ಯಾಂಕರ್‌ಗಳನ್ನು ಪಡೆಯಲು ಮಾತುಕತೆ ನಡೆಸಲಾಗಿದೆ. ನಗರದ ಪ್ರತಿಯೊಂದು ವಾರ್ಡ್‌ಗೆ ಒಂದರಂತೆ 60 ವಾರ್ಡ್‌ಗೆ 60 ಟ್ಯಾಂಕರ್ ನೀಡಲಾಗುವುದು, ಸರಕಾರಿ ಮತ್ತು ಸಾರ್ವಜನಿಕ ಬಾವಿಗಳನ್ನು ದುರಸ್ತಿಗೊಳಿಸಲಾಗುವುದು, ಅಗತ್ಯವಿದ್ದಲ್ಲಿ ಸಾರ್ವಜನಿಕ ಉಪಯೋಗಕ್ಕೆ ಬಳಸಬಹುದಾದ ಖಾಸಗಿ ಬಾವಿಗಳನ್ನೂ ದುರಸ್ತಿಪಡಿಸಲಾಗುವುದು ಎಂದ ಸಚಿವ ಖಾದರ್, ನೀರು ಇಲ್ಲದ ಪ್ರದೇಶದ ಜನತೆ ತಕ್ಷಣ ಜಿಲ್ಲಾಡಳಿತದ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.

ಸರಕಾರ ಸುಭದ್ರ: ರಾಜ್ಯ ಸರಕಾರ ಸುಭದ್ರವಾಗಿದೆ. ಬಿಜೆಪಿ ಅಧಿಕಾರಕ್ಕೇರುವುದು ಕೇಂದ್ರದಲ್ಲಿ. ಅದಕ್ಕಾಗಿ ಯಡಿಯೂರಪ್ಪರು ರಾಜ್ಯದ ಕನಸು ಕಾಣುವುದು ಬೇಡ. ಕಾಂಗ್ರೆಸ್-ಜೆಡಿಎಸ್ ಮಧ್ಯೆ ಬಿರುಕು ಸೃಷ್ಟಿಸಲು ಬಿಜೆಪಿಗರ ಪ್ರಯತ್ನಕ್ಕೆ ಯಶಸ್ಸು ಸಿಗುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಐದು ವರ್ಷಗಳ ಕಾಲ ಆಡಳಿತ ನಡೆಸಲಿದ್ದಾರೆ ಎಂದು ಖಾದರ್ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಪೂರ್ಣ ಸಹಕಾರ: ಉದ್ಯೋಗ ಅರಸಿಕೊಂಡು ದ.ಕ.ಜಿಲ್ಲೆಯಿಂದ ಕುವೈತ್‌ಗೆ ತೆರಳಿದ ಯುವಕರನ್ನು ಮರಳಿ ಕರೆತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈಗಾಗಲೆ ಶಾಸಕ ವೇದವ್ಯಾಸ ಕಾಮತ್ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ಅವರೊಂದಿಗೆ ನಾನೂ ಚರ್ಚೆ ಮಾಡಿದ್ದು, ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಮಾಜಿ ಮೇಯರ್ ಭಾಸ್ಕರ ಮೊಯ್ಲಿ, ಜಿಪಂ ಸದಸ್ಯೆ ಮಮತಾ ಗಟ್ಟಿ, ಪಕ್ಷದ ಮುಖಂಡರಾದ ಸಂತೋಷ್ ಶೆಟ್ಟಿ, ಸದಾಶಿವ ಉಳ್ಳಾಲ್, ನಝೀರ್ ಬಜಾಲ್, ಈಶ್ವರ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News