×
Ad

ದುಬೈಗೆ ತೆರಳುತ್ತಿದ್ದ ಜೆಟ್ ಏರ್‌ವೇಸ್ ಮಾಜಿ ಮುಖ್ಯಸ್ಥ ನರೇಶ್ ಗೋಯಲ್, ಪತ್ನಿಯ ಪ್ರಯಾಣಕ್ಕೆ ತಡೆ

Update: 2019-05-25 20:17 IST

ಮುಂಬೈ, ಮೇ.25: ಜೆಟ್ ಏರ್‌ವೇಸ್ ಮಾಜಿ ಮುಖ್ಯಸ್ಥ ನರೇಶ್ ಗೋಯಲ್ ಹಾಗೂ ಅವರ ಪತ್ನಿ ಅನಿತಾ ಗೋಯಲ್ ಅವರ ವಿದೇಶ ಪ್ರಯಾಣಕ್ಕೆ ಮುಂಬೈ ವಿಮಾನ ನಿಲ್ದಾಣದ ಪ್ರಾಧಿಕಾರ ಅವಕಾಶ ನಿರಾಕರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಗೋಯಲ್ ದಂಪತಿ ದುಬೈಗೆ ಪ್ರಯಾಣಿಸಲು ಎಮಿರೇಟ್ಸ್ ವಿಮಾನ ಇಕೆ 507 ಏರಲು ಸಿದ್ಧತೆ ನಡೆಸುತ್ತಿದ್ದ ವೇಳೆ ವಿಮಾನ ನಿಲ್ದಾಣ ಪ್ರಾಧಿಕಾರ ಅವರನ್ನು ತಡೆದಿದೆ. ಅನಿತಾ ಗೋಯಲ್ ಹೆಸರಲ್ಲಿದ್ದ ಅವರ ವಸ್ತುಗಳಿದ್ದ ಬ್ಯಾಗನ್ನೂ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ವರದಿ ತಿಳಿಸಿದೆ. ಜೆಟ್ ಏರ್‌ವೇಸ್‌ನ ಉದ್ಯೋಗಿಗಳಿಗೆ ಹಲವು ತಿಂಗಳಿನಿಂದ ವೇತನ ನೀಡದಿರುವ ನರೇಶ್ ಗೋಯಲ್ ಮತ್ತು ಇತರ ನಿರ್ದೇಶಕರು ಹಾಗೂ ಜೆಟ್ ಏರ್‌ವೇಸ್ ಆಡಳಿತವರ್ಗದ ಹಿರಿಯ ಸದಸ್ಯರ ಪಾಸ್‌ಪೋರ್ಟನ್ನು ಜಪ್ತಿ ಮಾಡಬೇಕು ಎಂದು ಜೆಟ್ ಏರ್‌ವೇಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಘಟನೆಯ ಅಧ್ಯಕ್ಷ ಕಿರಣ್ ಪವಸ್ಕರ್ ಕಳೆದ ತಿಂಗಳು ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು.

ಸಾಲಪೀಡಿತ ವೈಮಾನಿಕ ಸಂಸ್ಥೆಯನ್ನು ಉಳಿಸುವ ಉದ್ದೇಶದಿಂದ ನರೇಶ್ ಗೋಯಲ್ ತಾನು 26 ವರ್ಷಗಳ ಹಿಂದೆ ಆರಂಭಿಸಿದ್ದ ಜೆಟ್ ಏರ್‌ವೇಸ್‌ನ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದ್ದರು. ಅವರ ಜೊತೆಗೆ ಅನಿತಾ ಗೋಯಲ್ ಕೂಡಾ ತನ್ನ ರಾಜೀನಾಮೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News