ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ-ಯುಕೆಜಿ ಪ್ರಾರಂಭಕ್ಕೆ ಅಂಗನವಾಡಿ ನೌಕರರ ಸಂಘ ವಿರೋಧ

Update: 2019-05-25 14:58 GMT

ಮಂಗಳೂರು, ಮೇ 25: ರಾಜ್ಯ ಸರಕಾರವು ಸರಕಾರಿ ಶಾಲೆಯಲ್ಲೇ ಎಲ್‌ಕೆಜಿ ಮತ್ತು ಯುಕೆಜಿಯನ್ನು ಪ್ರಾರಂಭಿಸಲು ಮುಂದಾಗಿರುವ ಕ್ರಮವನ್ನು ಸಿಐಟಿಯು ಅಧೀನದ ರಾಜ್ಯ ಅಂಗನವಾಡಿ ನೌಕರರ ಸಂಘ ತೀವ್ರವಾಗಿ ವಿರೋಧ ವ್ಯಕ್ತಪಡಿಸಿವೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಮತ್ತು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಸರಕಾರದ ಈ ನೀತಿಯಿಂದ ಅಂಗನವಾಡಿ ಕೇಂದ್ರದ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಮೂರುವರೆ ವರ್ಷ ಮೇಲ್ಪಟ್ಟ ಮಕ್ಕಳಿಗೆ ಸರಕಾರಿ ಶಾಲೆಯಲ್ಲೇ ಎಲ್‌ಕೆಜಿ-ಯುಕೆಜಿ ಪಾಠ ಬೋಧಿಸಿದರೆ ಅಂಗನವಾಡಿ ಕೇಂದ್ರಗಳ ಅಗತ್ಯವು ಭವಿಷ್ಯದ ದಿನಗಳಲ್ಲಿ ಇಲ್ಲವಾದೀತು. ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಆಯ್ದ 4,100 ಸರಕಾರಿ ಪ್ರಾಥಮಿಕ ಶಾಲೆಗಳ ಆವರಣಕ್ಕೆ ಸ್ಥಳಾಂತರಿಸಿ ‘ಬಾಲಸ್ನೇಹಿ ಕೇಂದ್ರ’ಗಳನ್ನಾಗಿ ಬಲವರ್ಧನೆಗೊಳಿಸಲು ಸರಕಾರ ನಿರ್ಧರಿಸಿದೆ. ಇದರಿಂದ ಅಂಗನವಾಡಿ ಕೇಂದ್ರಗಳು ದುರ್ಬಲಗೊಳ್ಳಲಿದೆ ಎಂದರು.

ರಾಜ್ಯ ಸರಕಾರದ ಈ ನಿರ್ಧಾರದಿಂದ ಮಕ್ಕಳ ಆಹಾರ ಹಕ್ಕಿಗೆ ಸಮಸ್ಯೆಯಾಗಲಿದೆ. ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು ನಿಯಂತ್ರಿಸದ ಹೊರತು ಸರಕಾರಿ ಶಾಲೆಯನ್ನು ಉಳಿಸಲು ಸಾಧ್ಯವಿಲ್ಲ. ಆದರೆ, ಖಾಸಗಿ ಶಾಲೆಯನ್ನು ನಿಯಂತ್ರಿಸದೆ ಸರಕಾರಿ ಶಾಲೆಯಲ್ಲೇ ಎಲ್‌ಕೆಜಿ/ಯುಕೆಜಿ ಸ್ಥಾಪಿಸಿದರೆ ಅದರ ಪರಿಣಾಮ ಅಂಗನವಾಡಿ ಕೇಂದ್ರಗಳು ಮತ್ತು ಅಲ್ಲಿನ ಕಾರ್ಯಕರ್ತೆಯರು, ಸಹಾಯಕಿಯರ ಮೇಲೆ ಆಗಲಿದೆ. ಹಾಗಾಗಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ/ಯುಕೆಜಿ ಸ್ಥಾಪಿಸಲಿ. ಕೊಠಾರಿ ಆಯೋಗದ ವರದಿಯನ್ನು ಜಾರಿಗೊಳಿಸುವ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಶಕ್ತಿ ತುಂಬಬೇಕು ಎಂದು ವರಲಕ್ಷ್ಮಿ ನುಡಿದರು.

ಸುದ್ದಿಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯ ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News