ಅಜಿಲಮೊಗರು-ಕಡೇಶ್ವಾಲ್ಯ 'ಸೌಹಾರ್ದ ಸೇತುವೆ' ಕಾಮಗಾರಿಗೆ ಪ್ರಾರಂಭ

Update: 2019-05-25 15:11 GMT

ಬಂಟ್ವಾಳ, ಮೇ 25: ಬಂಟ್ವಾಳ ತಾಲೂಕಿನ ಅಜಿಲಮೊಗರು ಮತ್ತು ಕಡೇಶ್ವಾಲ್ಯ ಪ್ರದೇಶದ ಎರಡು ಪುರಾತನ ಮತ್ತು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ನಡುವೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯದ ಕೊಂಡಿಯಾಗಿ ನೇತ್ರಾವತಿ ನದಿಯಲ್ಲಿ ನಿರ್ಮಿಸಲು ಉದ್ದೇಶಿಸಿದ ಮಹತ್ವಾಕಾಂಕ್ಷೆಯ "ಸೌಹಾರ್ದ ಸೇತುವೆ" ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ.

ಒಟ್ಟು 312 ಮೀ. ನೇತ್ರಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಗುವ ಈ ಸೌಹಾರ್ದ ಸೇತುವೆಗೆ ಕಳೆದ ವರ್ಷ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಂಕುಸ್ಥಾಪನೆ ನೆರವೇರಿಸಿದ್ದರು. ಅ. 22ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಬಿ.ಸಿ.ರೋಡಿಗೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ಸಿ.ರೋಡಿನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. 

ಪ್ರಸಕ್ತ ಈ ಯೋಜನೆಗೆ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‍ಡಿಸಿಎಲ್) ವತಿಯಿಂದ 19.84 ಕೋಟಿ ರೂ. ಮೊತ್ತದ ಅನುದಾನ ಮಂಜೂರಾಗಿದೆ. ಈ ಸೇತುವೆ ನಿರ್ಮಾಣಗೊಂಡರೆ ತಾಲೂಕಿನ ನಾವೂರು, ಮಣಿನಾಲ್ಕೂರು, ಸರಪಾಡಿ, ಕಡೇಶ್ವಾಲ್ಯ, ಮಾಣಿ, ಬುಡೋಳಿ, ಬರಿಮಾರು, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಬೆಳ್ತಂಗಡಿ ತಾಲೂಕಿನ ತೆಕ್ಕಾರು, ಬಾರ್ಯ, ತಣ್ಣೀರುಪಂತ ಮತ್ತಿತರ ಪ್ರದೇಶಗಳಿಗೆ ತ್ವರಿತವಾಗಿ ತೆರಳಲು ಅನುಕೂಲಕರವಾಗಲಿದೆ.

ಧಾರ್ಮಿಕ ಕ್ಷೇತ್ರ:

ಜಿಲ್ಲೆಯ ಜೀವನದಿಯಾಗಿ ಗುರುತಿಸಿಕೊಂಡಿರುವ ನೇತ್ರಾವತಿ ನದಿಯ ಒಂದು ಬದಿ ಪುರಾತನ ಮತ್ತು ಕಾರಣಿಕ ಪ್ರಸಿದ್ಧ ಲಕ್ಷ್ಮೀನರಸಿಂಹ ದೇವಸ್ಥಾನ ಇದ್ದರೆ, ಇನ್ನೊಂದು ಬದಿ ಪುರಾತನ ಮತ್ತು ಸೌಹಾರ್ದತೆ ಹಿನ್ನೆಲೆ ಹೊಂದಿರುವ ಅಜಿಲಮೊಗರು ಜುಮಾ ಮಸೀದಿ ಇದೆ. ಇದೀಗ ಅಜಿಲಮೊಗರು ಮಸೀದಿಗೆ ಬಂಟ್ವಾಳ-ಮಣಿಹಳ್ಳ ರಾಷ್ಟ್ರೀಯ ಹೆದ್ದಾರಿಯಿಂದ ಸರಪಾಡಿ-ಅಲ್ಲಿಪಾದೆ ರಸ್ತೆ ಮೂಲಕ ಸಾಗಬೇಕು. ಕಡೇಶ್ವಾಲ್ಯ ಕ್ಷೇತ್ರಕ್ಕೆ ಬಿ.ಸಿ.ರೋಡು-ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಗಡಿಯಾರ ರಸ್ತೆ ಮೂಲಕ ಸುತ್ತು ಬಳಸಿ ಪ್ರಯಾಣಿಸಬೇಕಿತ್ತು. ಆದರೆ, ಈ ಸೇತುವೆಯಿಂದ ತೆರಳಲು ಇನ್ನಷ್ಟು ಹತ್ತಿರವಾಗಲಿದೆ.

2 ವರ್ಷಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ: 

ಚೆನ್ನೈನ ಎಸ್ಪಿಎಲ್ ಇನ್‍ಫ್ರಾಸ್ಟ್ರಕ್ಚರ್ ಕಂಪೆನಿ ಸೇತುವೆ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿದ್ದು, ಮುಂದಿನ 2ವರ್ಷಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ತಿಳಿಸಲಾಗಿದೆ. ಒಟ್ಟು 312 ಮೀಟರ್ ಉದ್ದ ಮತ್ತು 10.50 ಮೀ. ಅಗಲದ ಸೇತುವೆ ಜೊತೆಗೆ ಒಟ್ಟು 378 ಮೀ. ಉದ್ದದ ಸಂಪರ್ಕ ರಸ್ತೆಯೂ ನಿರ್ಮಾಣಗೊಳ್ಳಲಿದೆ ಎಂದು ವಾಗಲಿದೆ ಎಂದು ಹಾಸನ ವಿಭಾಗ ಕೆಆರ್‍ಡಿಸಿಎಲ್ ವಿಭಾಗೀಯ ಅಧಿಕಾರಿ ಆರ್. ಮಂಜುನಾಥ್ ತಿಳಿಸಿದ್ದಾರೆ.

ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು, ಮಳೆಗಾಲ ಆರಂಭಗೊಳ್ಳುವ ಮೊದಲು ನದಿಯಲ್ಲಿ ಆಧಾರಸ್ಥಂಭಗಳಿಗೆ ಪಂಚಾಂಗ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಮಳೆಗಾಲ ಮುಗಿಯುತ್ತಿದ್ದಂತೆಯೇ ಒಂದೇ ವರ್ಷದೊಳಗೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರ ದತ್ತ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News