ಪೆನ್ಸಿಲ್ ಉದ್ಯಮ ಹೆಸರಿನಲ್ಲಿ ವಂಚನೆ: ನಾಲ್ವರ ವಿರುದ್ಧ ಪ್ರಕರಣ ದಾಖಲು

Update: 2019-05-25 15:32 GMT

ಪುತ್ತೂರು: ಪೆನ್ಸಿಲ್ ಉತ್ಪಾದನಾ ಉದ್ಯಮದ ಹೆಸರಿನಲ್ಲಿ ನಡೆದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಠಾಣೆಯಲ್ಲಿ ಉದ್ಯಮ ಆರಂಭಿಸಿದ್ದ ಬದ್ರಿನಾಥ್ ಎಂಟರ್‍ಪ್ರೈಸಸ್ ಸಂಸ್ಥೆಯ ಮಾಲಕ ಕೇರಳ ಮೂಲದ ಮನುಚಂದ್ರನ್ ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪೆನ್ಸಿಲ್ ಉತ್ಪಾದನಾ ಉದ್ಯಮದ ಹೆಸರಿನಲ್ಲಿ 80 ಸಾವಿರ ರೂ. ಪಡೆದುಕೊಂಡು ಪೆನ್ಸಿಲ್ ತಯಾರಿಸುವ ಯಂತ್ರವನ್ನು ನೀಡಿ, ಪೆನ್ಸಿಲ್ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳನ್ನು ನಾವೇ ಒದಿಸಿ, ತಯಾರಿಸಲಾದ ಪೆನ್ಸಿಲ್‍ಗಳನ್ನು 75 ಪೈಸೆಯಂತೆ ಮಜೂರಿ ನೀಡಿ ಖರೀದಿಸುವುದಾಗಿ ನಂಬಿಸಿ ಇದೀಗ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಕಬಕ ವ್ಯಾಪ್ತಿಯ ಹಲವರು ಕಬಕದಲ್ಲಿರುವ ಸಂಸ್ಥೆಯ ಕಚೇರಿಗೆ ಶುಕ್ರವಾರ ಮಧ್ಯಾಹ್ನ ಬಂದಿದ್ದ ಬದ್ರಿನಾಥ್ ಎಂಟರ್‍ಪ್ರೈಸಸ್ ಸಂಸ್ಥೆಯ ಮಾಲಕ ಮನುಚಂದ್ರನ್ ಎಂಬವರಿಗೆ ದಿಗ್ಭಂಧನ ವಿಧಿಸಿದ್ದರು. 

ಈ ಘಟನೆಗೆ ಸಂಬಂಧಿಸಿ ಸುಳ್ಯ ತಾಲೂಕಿನ ಐವತೊಕ್ಲು ಗ್ರಾಮದ ಪಡ್ಪುನಂಗಡಿ ನಿವಾಸಿ ಇಬ್ರಾಹಿಂ ಖಲೀಲ್ ಎಂಬವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಅವರು ನೀಡಿರುವ ದೂರಿನಂತೆ ಪೆನ್ಸಿಲ್ ಉದ್ಯಮ ಆರಂಭಿಸಿದ್ದ ಬದ್ರಿನಾಥ್ ಎಂಟರ್‍ಪ್ರೈಸಸ್ ಸಂಸ್ಥೆಯ ಮಾಲಕ ಮನುಚಂದ್ರನ್, ಪಾಲುದಾರರಾದ ಇರ್ಫಾನ್ ಮುಸ್ಲಿಯಾರ್ ಕಬಕ,  ಹಂಝ ಕಬಕ ಮತ್ತು ಫಾರೂಕ್ ಕಬಕ ಎಂಬವರ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ತನ್ನಿಂದ  ರೂ.80 ಸಾವಿರ ಪಡೆದುಕೊಂಡು ಪೆನ್ಸಿಲ್ ತಯಾರಿಸುವ ಯಂತ್ರವನ್ನು ಒದಗಿಸಿ, ಬಳಿಕ ಕಚ್ಚಾ ವಸ್ತುಗಳನ್ನು ನಾವೇ ಒದಗಿಸಿ, ಉತ್ಪಾದಿಸಲಾದ ಪೆನ್ಲಿಲ್‍ಗಳನ್ನು 75 ಪೈಸೆಯಂತೆ ಖರೀದಿಸುವುದಾಗಿ ನಂಬಿಸಿದ್ದರು. ತಾನು ಪೆನ್ಸಿಲ್ ತಯಾರಿಸಿ ಸಂಸ್ಥೆಗೆ ನೀಡಿದ ಸಂದರ್ಭದಲ್ಲಿ ಹಣ ನೀಡದೆ , ಪೆನ್ಸಿಲ್‍ಗಳ ಮಾರಾಟವಾದ ಕೂಡಲೇ ಹಂತಹಂತವಾಗಿ ಹಣ ನೀಡುವುದಾಗಿ ತಿಳಿಸಿದ್ದ ಅವರು ಇತ್ತೀಚೆಗೆ ಕಚ್ಚಾ ವಸ್ತುಗಳನ್ನು ಕೂಡ ಒದಗಿಸದೆ, ಸಂಪರ್ಕಕ್ಕೂ ಸಿಗದೆ ವಂಚನೆ ಮಾಡಿರುವುದಾಗಿ ಇಬ್ರಾಹಿಂ ಖಲೀಲ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News