ಯಕ್ಷಗಾನ ಕಲೆಯಲ್ಲಿ ಸಾಮರಸ್ಯ ಅಡಕ: ಪಲಿಮಾರು ಸ್ವಾಮೀಜಿ

Update: 2019-05-25 15:47 GMT

ಉಡುಪಿ, ಮೇ 25: ಪರ್ಯಾಯ ಪಲಿಮಾರು ಮಠ, ಉಡುಪಿ ಶ್ರೀಕೃಷ್ಣ ಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಯಕ್ಷಗಾನ ಕಲಾ ರಂಗದ ವತಿಯಿಂದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾದ ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭ ಶನಿವಾರ ನಡೆಯಿತು.

ಸಮಾರಂಭದಲ್ಲಿ ಹಿರಿಯ ತಾಳಮದ್ದಳೆ ಅರ್ಥಧಾರಿಗಳಾದ ಕೆ.ವಿ.ಗಣಪಯ್ಯ ಹಾಗೂ ನೇವಣಿ ಗಣೇಶ್ ಭಟ್ ಅವರಿಗೆ ಕ್ರಮವಾಗಿ ‘ಮಟ್ಟಿ ಮುರಲೀಧರ ರಾವ್’ ಹಾಗೂ ‘ಪೆರ್ಲ ಕೃಷ್ಣ ಭಟ್’ ಪ್ರಶಸ್ತಿಯನ್ನು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಪ್ರದಾನ ಮಾಡಿದರು.

ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ, ಯಕ್ಷಗಾನ ನಮ್ಮೂರಿನ ಕಲೆ. ಇದರ ಬೇರು ನಮ್ಮ ಜಿಲ್ಲೆಯಲ್ಲಿದ್ದರೂ ಅದರ ಟೊಂಗೆ ಇಡೀ ದೇಶಾದ್ಯಂತ ವಿಸ್ತರಿಸಿದೆ. ತಾಳಮದ್ದಲೆ ಭಾಷೆಯ ಪರಿಧಿಯನ್ನು ಹೊಂದಿರುವ ಕಲೆಯಾಗಿದೆ. ಯಕ್ಷಗಾನ ದಲ್ಲಿ ಸಾಮರಸ್ಯ ಅಡಗಿದೆ. ಸಾಮರಸ್ಯ ಏನು ಎಂಬುದನ್ನು ನಾವು ಯಕ್ಷಗಾನ ದಿಂದ ಕಲಿಯಬೇಕಾಗಿದೆ ಎಂದರು.

ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅಭಿನಂದನಾ ಭಾಷಣ ಮಾಡಿದರು. ಕರ್ಣಾಟಕ ಬ್ಯಾಂಕಿನ ಮಹಾಪ್ರಬಂಧಕ ರಮೇಶ್ ಎಸ್., ಲೆಕ್ಕ ಪರಿಶೋಧಕ ಶಿವಾನಂದ ಪೈ ಬಿ. ಮುಖ್ಯ ಅತಿಥಿಗಳಾಗಿದ್ದರು. ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್ ಉಪಸ್ಥಿತರಿದ್ದರು.

ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ‘ಧರ್ಮ ರಾಯ- ಭೀಷ್ಮ’ ತಾಳಮದ್ದಲೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News