ಡ್ರೆಡ್ಜಿಂಗ್ ಮೂಲಕ ಸ್ವರ್ಣೆಯಿಂದ ಮರಳು ತೆರವು: ರಘುಪತಿ ಭಟ್

Update: 2019-05-25 15:49 GMT

ಉಡುಪಿ, ಮೇ 25: ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ಬಜೆ ಡ್ಯಾಂಗೆ ಭೇಟಿ ನೀಡಿ, ಬಳಿಕ ಪುತ್ತಿಗೆ ಮಠದ ಬಳಿ ನೀರು ಹಾಯಿಸಲು ಅಳವಡಿಸಲಾದ ಎರಡು ಪಂಪ್‌ಗಳನ್ನು ಪರಿಶೀಲಿಸಿದರು.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರಘುಪತಿ ಭಟ್, ಬಜೆಯಿಂದ ಹೂಳೆತ್ತಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ಅದಕ್ಕೆ ಇನ್ನಷ್ಟೆ ಟೆಂಡರ್ ಆಗಬೇಕಾಗಿದೆ. ಕಾಮಗಾರಿಗೆ ಸುಮಾರು 5.25ಕೋಟಿ ರೂ. ನಗರಸಭೆಯಿಂದ ಅಂದಾಜು ವೆಚ್ಚ ಮಾಡಲಾಗಿದೆ. ಈ ಬಾರಿ ನದಿಯಿಂದ ಮರಳು ತೆಗೆಯದಿದ್ದರೆ ಮುಂದಿನ ವರ್ಷ ಮತ್ತೆ ನೀರಿಗೆ ಸಮಸ್ಯೆ ಆಗಲಿದೆ ಎಂದರು.

ನದಿಯಿಂದ ಡ್ರೆಡ್ಜಿಂಗ್ ಮೂಲಕ ಮರಳು ತೆಗೆಯಲಾಗುತ್ತದೆ. ಆ ಮರಳನ್ನು ಗುತ್ತಿಗೆದಾರರು ಸಂಗ್ರಹ ಮಾಡಿ ಗಣಿ ಇಲಾಖೆಗೆ ಒಪ್ಪಿಸುತ್ತಾರೆ. ಅದನ್ನು ಗಣಿ ಇಲಾಖೆ ಹರಾಜು ಹಾಕಲಿದೆ. ಇಲಾಖೆ ತನ್ನ ರಾಜಸ್ವಧನ ತೆಗೆದು ಹರಾಜು ಮೊತ್ತವನ್ನು ನಗರಸಭೆಗೆ ಪಾವತಿಸಲಿದೆ. ಹೀಗೆ ನಗರಸಭೆ ಹಾಕಿದ ಹಣವನ್ನು ವಾಪಾಸ್ಸು ಡೆಯಲಿದೆ ಎಂದು ಅವರು ತಿಳಿಸಿದರು.

ಪುತ್ತಿಗೆ ಮಠದ ಬಳಿ ಡ್ರೆಡ್ಜಿಂಗ್ ಮಾಡದ ಪರಿಣಾಮ ಬಜೆ ಡ್ಯಾಂಗೆ ನೀರು ಹರಿದು ಬರುವುದು ಕಡಿಮೆಯಾಗಿತ್ತು. ಭಂಡಾರಿಬೆಟ್ಟುವಿನಲ್ಲಿ ನೀರು ಖಾಲಿ ಯಾದ ಕೂಡಲೇ ಪುತ್ತಿಗೆ ಮಠದ ಬಳಿ ಡ್ರೆಡ್ಜಿಂಗ್ ಮಾಡಬೇಕಾಗಿತ್ತು. ಆದರೆ ಅಧಿಕಾರಿಗಳು ವಿಳಂಬ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿ ಮೇ 24ರಂದು ರಾತ್ರಿ ಮಠದ ಬಳಿ ಎರಡು ಬೋಟುಗಳಲ್ಲಿ ಡ್ರೆಡ್ಜಿಂಗ್ ಮಾಡಿ ನೀರು ಹರಿದು ಹೋಗುವಂತೆ ಮಾಡಲಾಗಿದೆ ಎಂದರು.

ನೀರಿನ ಹರಿವು ನಿರಂತರವಾಗಿ ನಡೆಯುತ್ತಿದ್ದಾಗ ಬಜೆ ಡ್ಯಾಂನಲ್ಲಿ 1.80 ಮೀಟರ್‌ನಷ್ಟು ನೀರಿನ ಸಂಗ್ರಹ ಇತ್ತು. ಸರಿಯಾದ ಡ್ರೆಡ್ಜಿಂಗ್ ಇಲ್ಲದೆ ಮೇ 24ರಂದು ಸಂಜೆ ವೇಳೆ ನೀರಿನ ಸಂಗ್ರಹ ಒಂದು ಮೀಟರ್‌ಗಿಂತ ಕಡಿಮೆ ಆಗಿದೆ. ಸದ್ಯ ಸುಮಾರು 10 ದಿನಗಳಿಗೆ ಬೇಕಾದ ನೀರು ಸ್ವರ್ಣ ನದಿಯಲ್ಲಿದೆ ಎಂದು ಅವರು ಹೇಳಿದರು.

ಪುತ್ತಿಗೆ ಮಠದ ಬಳಿ ನೀರಿನ ಹರಿವು ಕಡಿಮೆಯಾದ ಕೂಡಲೇ ಮಠ ಹಾಗೂ ಬಜೆ ಡ್ಯಾಂ ಮಧ್ಯೆ ಇರುವ ಮೂರು ಗುಂಡಿಗಳಲ್ಲಿ ಬೇಕಾದಷ್ಟು ಪ್ರಮಾಣ ದಲ್ಲಿರುವ ನೀರನ್ನು ಡ್ಯಾಂಗೆ ಹಾಯಿಸಲಾಗುವುದು. ಸದ್ಯ ಡ್ಯಾಂನಲ್ಲಿ ಪ್ರತಿದಿನ 14 ಗಂಟೆ ಪಂಪಿಂಗ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

‘ಮೇ 28ರಂದು ಮರಳು ಸಂಬಂಧ ಸಭೆ’

ಮೇ 27ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೇ 28ರಂದು ಮರಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲ ಶಾಸಕರ ಅಧಿಕೃತ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.

ಈ ವರ್ಷ ಸದ್ಯದಲ್ಲಿ ಮಳೆಗಾಲ ಆರಂಭವಾಗುವುದರಿಂದ ಮರಳುಗಾರಿಕೆ ಆರಂಭಿಸಲು ಆಗುವುದಿಲ್ಲ. ಆದರೆ ಕನಿಷ್ಠ ಪಕ್ಷ ಮುಂದಿನ ಆಗಸ್ಟ್ ತಿಂಗಳಲ್ಲಿ ಯಾದರೂ ಮರಳುಗಾರಿಕೆ ಆರಂಭಿಸಲು ಜಿಲ್ಲಾಡಳಿತ ತಯಾರಿ ಮಾಡಬೇಕು. ನೀತಿ ಸಂಹಿತೆಯ ಕಾರಣದಿಂದ ಈ ಜಿಲ್ಲಾಧಿಕಾರಿ ಬಂದ ಮೇಲೆ ಒಂದೇ ಒಂದು ಅಧಿಕೃತ ಸಭೆ ನಡೆಸಲು ಆಗಿಲ್ಲ. ಈ ವರ್ಷ ಮರಳು ತೆಗೆಯದ ಪರಿ ಣಾಮ ಈ ಬಾರಿ ಮಳೆಗಾಲದಲ್ಲಿ ಉಪ್ಪೂರು, ಪಾಂಗಾಳ, ಉದ್ಯಾವರ ಹೊಳೆಗಳಲ್ಲಿ ನೆರೆ ಬರುವುು ಖಂಡಿತ ಎಂದು ಅವರು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News