ಪ್ರಾಕೃತಿಕ ವಿಕೋಪ ಕುರಿತ ದೂರಿಗೆ ಶೀಘ್ರವೇ ಮೊಬೈಲ್ ಆ್ಯಪ್: ಡಿಸಿ ಹೆಪ್ಸಿಬಾ ರಾಣಿ

Update: 2019-05-25 15:54 GMT

ಉಡುಪಿ, ಮೇ 25:ಈ ಸಲದ ಮುಂಗಾರಿನ ಸಂದರ್ಭದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಂಭವಿಸಬಹುದಾದ ಯಾವುದೇ ಪ್ರಾಕೃತಿಕ ವಿಕೋಪ ದಿಂದಾಗುವ ಹಾನಿ, ನೆರೆ, ಸಮಸ್ಯೆಗಳ ಕುರಿತು ತಕ್ಷಣವೇ ಮಾಹಿತಿ, ದೂರು ನೀಡಲು ಮೊಬೈಲ್ ಆ್ಯಪ್ ‘ಉಡುಪಿಹೆಲ್ಪ್.ಕಾಮ್’ (udupihelp.com) ನ್ನು ಶೀಘ್ರವೇ ಬಿಡುಗಡೆ ಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು. ಚುನಾವಣೆಯ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ದೂರು ಸಲ್ಲಿಸಲು ರೂಪಿಸಲಾದ ಅತ್ಯಂತ ಯಶಸ್ವಿ ‘ಇ-ವಿಜಿಲ್’ ಮಾದರಿಯಲ್ಲೇ ಈ ಆ್ಯಪ್‌ನ್ನು ರೂಪಿಸಲಾಗುತ್ತದೆ ಎಂದರು.

ಈ ಸಲದ ಮಳೆಗಾಲದಲ್ಲಿ ಸಂಭವಿಸಬಹುದಾದ ಸಂಭಾವ್ಯ ನೆರೆ, ಮನೆಗಳ ಕುಸಿತ, ಮರ ಬಿದ್ದು ಹಾನಿ ಅಥವಾ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಇನ್ನಿತರ ಯಾವುದೇ ದೂರುಗಳನ್ನು ಆ್ಯಪ್ ಮೂಲಕ ದಾಖಲಿಸಿದರೆ, ನಿಗದಿತ ಸಮಯ ದೊಳಗೆ ಅವುಗಳನ್ನು ಬಗೆಹರಿಸ ಲಾಗುವುದು ಎಂದವರು ಹೇಳಿದರು.

ಮಳೆ-ಗಾಳಿಯ ಸಂದರ್ಭ ರಸ್ತೆಯ ಮೇಲೆ, ಮನೆ ಮೇಲೆ ಮರಬಿದ್ದರೆ, ಎಲ್ಲಾದರೂ ನೆರೆ ಬಂದರೆ ಅದರ ಪೋಟೊ ಅಥವಾ ವಿಡಿಯೋವನ್ನು ಆ್ಯಪ್ ನಲ್ಲಿ ಅಪ್‌ಲೋಡ್ ಮಾಡಿದರೆ, ತಕ್ಷಣ ಜಿಪಿಎಸ್ ಮೂಲಕ ಸ್ಥಳ ಪತ್ತೆಹಚ್ಚಿ ಪರಿಹಾರತಂಡವನ್ನು ಕಳುಹಿಸಲಾಗುವುದು ಎಂದು ಹೆಪ್ಸಿಬಾ ರಾಣಿ ತಿಳಿಸಿದರು.

ಸದ್ಯಕ್ಕೆ ಇದು ಪ್ರಾಯೋಗಿಕವಾಗಿದ್ದು, ಉಡುಪಿ ನಗರಸಭೆಗೆ ಸೀಮಿತ ವಾಗಿರುತ್ತದೆ. ಇದರ ಯಶಸ್ಸನ್ನು ನೋಡಿಕೊಂಡು ಮುಂದೆ ಅದನ್ನು ಉಡುಪಿ ಜಿಲ್ಲೆಗೆ ವಿಸ್ತರಿಸಲು ಚಿಂತನೆ ನಡೆಸಲಾಗುವುದು.ಈಗಾಗಲೇ ಇದರ ಪ್ರಾಥಮಿಕ ಕೆಲಸಗಳು ಮುಗಿದಿದ್ದು, ಮುಂದಿನ ವಾರದಲ್ಲಿ ಮೊಬೈಲ್ ಆ್ಯಪ್‌ನ್ನು ಬಿಡುಗಡೆ ಗೊಳಿಸಲಾಗುವುದು ಎಂದರು.

ಮರಳು ಸಮಸ್ಯೆ:  ಜಿಲ್ಲೆಯ ಮರಳು ಸಮಸ್ಯೆ ಕುರಿತಂತೆ ಏಳು ಮಂದಿ ಸದಸ್ಯರ ಮರಳು ಸಮಿತಿ ಸಭೆಯನ್ನು ಮೇ 15ರಂದು ನಡೆಸಲಾಗಿದೆ. ಇದರಲ್ಲಿ ಸಿಆರ್‌ಝಡ್ ಪ್ರದೇಶದಲ್ಲಿ ನಿಯಮಾನುಸಾರ ಮರಳುಗಾರಿಕೆಗೆ ಅರ್ಜಿ ಹಾಕಿಕೊಂಡವರ, ಪರವಾನಿಗೆ ಇರುವವರ ಕುರಿತು ಚರ್ಚಿಸಲಾಗಿದೆ. ಸಿಆರ್‌ಝಡ್‌ನಲ್ಲಿ ತೆರವಿಗೆ ಲಭ್ಯವಿರುವ ಮರಳು ದಿಬ್ಬಗಳಲ್ಲಿ ಸಿಗುವ ಮರಳಿನ ಕುರಿತೂ ಪರಾಮರ್ಶೆ ನಡೆಸಲಾಗಿದೆ ಎಂದರು.

ಸಿಆರ್‌ಝಡ್ ಕಾನೂನಿನಂತೆ ಜೂನ್ 1ರಿಂದ ಜು.31ರವರೆಗೆ 60 ದಿನಗಳ ಕಾಲ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆಯೊಂದಿಗೆ ಮರಳುಗಾರಿಕೆಗೂ ನಿಷೇಧವಿರುತ್ತದೆ. ಮೀನುಗಳು ಮೊಟ್ಟೆಯಿಟ್ಟು ಮರಿ ಮಾಡುವ ಈ ಸಮಯ ದಲ್ಲಿ ಮೀನುಗಾರಿಕೆ ನಡೆಸುವಂತಿಲ್ಲ. ಹೀಗಾಗಿ ಈ ಅವಧಿಯಲ್ಲಿ ಮುಂದಿನ ಕಾರ್ಯಯೋಜನೆಗಳ ಕುರಿತು ಚಿಂತನೆ ನಡೆಸುವಂತೆ ತಹಶೀಲ್ದಾರ್ ಸೇರಿದಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮತದಾರರಿಗೆ ಕೃತಜ್ಞತೆ: ಈ ಬಾರಿಯ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯನ್ನು ಯಾವುದೇ ಅಹಿತಕರ ಘಟನೆಗಳಿಲ್ಲದೇ, ಅತ್ಯಂತ ಶಾಂತಿಯುತವಾಗಿ ನಡೆಸಲು ಸಹಕರಿಸಿರುವುದಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಲೋಕಸಭಾ ಕ್ಷೇತ್ರದ ಸಮಸ್ತ ಮತದಾರರಿಗೆ, ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸಹಕರಿಸಿದ ಸಾರ್ವಜನಿಕರಿಗೆ, ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಹಾಗೂ ಚುನಾವಣೆಯಲ್ಲಿ ಶ್ರಮಿಸಿದ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.

ಮತಯಂತ್ರಗಳು ಭದ್ರತಾ ಕೊಠಡಿಗೆ: ಮತ ಎಣಿಕೆಗೆ ಮುಗಿದ ನಂತರ ಮತಯಂತ್ರ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಚುನಾವಣಾ ದಾಖಲೆಗಳನ್ನು ಮೊಹರು ಮಾಡಿ ಉಡುಪಿ ಜಿಲ್ಲಾ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಮಣಿಪಾಲದ ಜಿಲ್ಲಾ ಕಚೇರಿ ಸಂಕೀರ್ಣದಲ್ಲಿರುವ ಭದ್ರತಾ ಕೊಠಡಿಗೆ ಸೂಕ್ತ ಭದ್ರತಾ ವ್ಯವಸ್ಥೆಯೊಂದಿಗೆ ಸಾಗಿಸಿ ಭದ್ರತಾ ಕೊಠಡಿಯಲ್ಲಿ ಕ್ಷೇತ್ರವಾರು ಇರಿಸಲಾಗಿದೆ ಎಂದರು.

ಅದೇ ರೀತಿ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಮೊಹರು ಮಾಡಿ ಚಿಕ್ಕಮಗಳೂರು ಜಿಲ್ಲಾ ಚುನಾವಣಾಧಿಕಾರಿಯವರಿಗೆ ಹಸ್ತಾಂತರಿಸಲಾಗಿದೆ. ಅವುಗಳನ್ನು ಬಿಗು ಭದ್ರತೆಯೊಂದಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿಕೊಡಲಾಗಿದೆ ಎಂದು ಹೆಪ್ಸಿಬಾ ರಾಣಿ ನುಡಿದರು.

ಈ ಮತಯಂತ್ರಗಳು ನಿಯಮದಂತೆ ಮುಂದಿನ 45 ದಿನಗಳ ಕಾಲ ಭದ್ರತಾ ಕೊಠಡಿಯಲ್ಲಿರುತ್ತದೆ. ಅಲ್ಲಿಯವರೆಗೆ ಇವಿಎಂನಲ್ಲಿರುವ ಮತಗಳು ಹಾಗೂ ವಿವಿಪ್ಯಾಟ್‌ನ ಮತಚೀಟಿಗಳನ್ನು ಸುರಕ್ಷಿತವಾಗಿರಿಸಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಹಾಗೂ ಅಪರ ಜಿಲ್ಲಾಧಿಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News