ಯುವಕನಿಗೆ ಚೂರಿ ಇರಿತ: ಅಪ್ರಾಪ್ತರು ಸಹಿತ 10 ಮಂದಿ ಆರೋಪಿಗಳು ಸೆರೆ

Update: 2019-05-25 16:27 GMT

ಮಂಗಳೂರು, ಮೇ 25: ನಗರದ ಉರ್ವ ಚರ್ಚ್ ಬಳಿ ಮದ್ಯದ ಅಮಲಿನಲ್ಲಿ ಯುವಕನಿಗೆ ದುಷ್ಕರ್ಮಿಗಳು ಚೂರಿ ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕರು ಸಹಿತ 10 ಆರೋಪಿಗಳನ್ನು ಉರ್ವ ಪೊಲೀಸರು ಬಂಧಿಸುವಲ್ಲಿ ಶನಿವಾರ ಯಶಸ್ವಿಯಾಗಿದ್ದಾರೆ.

ಬೋಳಾರ ನಿವಾಸಿಗಳಾದ ಆಶೀಶ್, ತ್ರಿಶೂಲ್, ಸುಶಾಂತ್, ಸಾಗರ್, ಕಿಶನ್, ಅನುಶ್, ಅಂಕಿತ್, ನಿಶಾಂತ್ ಸಹಿತ ಇಬ್ಬರು ಅಪ್ರಾಪ್ತರು ಬಂಧಿತ ಆರೋಪಿಗಳು. ಚೂರಿ ಇರಿತಕ್ಕೊಳಗಾದ ಗಾಯಾಳು ರಿತೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಆರೋಗ್ಯದಲ್ಲಿ ಚೇತರಿಕೆ ಕಂಡಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ವಿವರ: ನಗರದ ಉರ್ವ ಚರ್ಚ್ ಬಳಿ ಶುಕ್ರವಾರ ರಾತ್ರಿ 10 ಗಂಟೆ ಸುಮಾರು ಮದ್ಯದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಯುವಕರ ನಡುವೆ ಜಗಳವಾಗಿದೆ. ಜಗಳ ದೊಡ್ಡದಾಗುತ್ತಾ ಚೂರಿಯಿಂದ ಇರಿಯುವ ಮಟ್ಟಕ್ಕೆ ತಲುಪಿದೆ. ಸುಮಾರು 10 ಮಂದಿಯಿದ್ದ ದುಷ್ಕರ್ಮಿಗಳ ಗುಂಪೊಂದು ರಿತೇಶ್‌ಗೆ ಇರಿದು ಸ್ಥಳದಿಂದ ಪರಾರಿಯಾಗಿತ್ತು.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ, ಪರಾರಿಯಾದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆ ನಡೆದ 24 ಗಂಟೆಯೊಳಗೆ ಕೃತ್ಯ ನಡೆಸಿದ ಎಲ್ಲ 10 ಮಂದಿ ಆರೋಪಿಗಳನ್ನು ಉರ್ವ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News