ದಾಬೋಲ್ಕರ್ ಹತ್ಯೆ ಪ್ರಕರಣ: ನ್ಯಾಯವಾದಿ, ಬಾಂಬ್ ಸ್ಫೋಟದ ಆರೋಪಿಯ ಬಂಧನ

Update: 2019-05-25 16:36 GMT

ಹೊಸದಿಲ್ಲಿ, ಮೇ.25: ಪ್ರಗತಿಪರ ಚಿಂತಕ ಡಾ. ನರೇಂದ್ರ ದಾಬೋಲ್ಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ಶನಿವಾರ ಸನಾತನ ಸಂಸ್ಥೆ ಕಾರ್ಯಕರ್ತರಾದ ನ್ಯಾಯವಾದಿ ಸಂಜೀವ್ ಪುನಲೇಕರ್ ಮತ್ತು ವಿಕ್ರಂ ಭವೆ ಎಂಬವರನ್ನು ಬಂಧಿಸಿದೆ ಎಂದು indianexpress.com ವರದಿ ಮಾಡಿದೆ.

ವಕೀಲರ ಸಂಘ ಹಿಂದು ವಿದಿಜ್ಞಾ ಪರಿಷತ್‌ನ ಪದಾಧಿಕಾರಿಯಾಗಿರುವ ಪುನಲೇಕರ್, ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಹಿಂದು ಕಾರ್ಯಕರ್ತರಿಗೆ ಮತ್ತು ಸನಾತನ ಸಂಸ್ಥೆ ಕಾರ್ಯಕರ್ತರಿಗೆ ಕಾನೂನು ಬೆಂಬಲ ನೀಡುತ್ತಿದ್ದ. ವಿಕ್ರಂ ಭವೆ ಸನಾತನ ಸಂಸ್ಥೆಯ ಸದಸ್ಯನಾಗಿದ್ದು 2008ರಲ್ಲಿ ಥಾಣೆಯ ಚಿತ್ರಮಂದಿರ ಮತ್ತು ಸಭಾಂಗಣದಲ್ಲಿ ನಡೆದ ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾನೆ. ಈತನಿಗೆ 2013ರಲ್ಲಿ ಬಾಂಬೆ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಪುನಲೇಕರ್ ಮತ್ತು ಭವೆಯನ್ನು ರವಿವಾರ ಪುಣೆಯ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಇದರೊಂದಿಗೆ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೇರಿದೆ. ಈ ಪ್ರಕರಣದ ಆರೋಪಿಗಳು ಒಂದೋ ಸನಾತನ ಸಂಸ್ಥೆಯ ಜೊತೆ ಅಥವಾ ಅದರ ಅಂಗಸಂಸ್ಥೆ ಹಿಂದು ಜನಜಾಗೃತಿ ಸಮಿತಿ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದಾರೆ. 2013ರ ಆಗಸ್ಟ್ 20ರಂದು ದಾಬೋಲ್ಕರ್ ಪುಣೆಯ ಓಂಕಾರೇಶ್ವರ್ ಸೇತುವೆ ಬಳಿ ಮುಂಜಾನೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News