ರಾಹುಲ್ ರಾಜೀನಾಮೆಯನ್ನು ಸರ್ವಾನುಮತದಿಂದ ತಿರಸ್ಕರಿಸಿದ ಕಾಂಗ್ರೆಸ್

Update: 2019-05-25 16:37 GMT

ಹೊಸದಿಲ್ಲಿ,ಮೇ 25: ಶನಿವಾರ ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ) ಸಭೆಯಲ್ಲಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಷ್ಟ್ರಮಟ್ಟದಲ್ಲಿ ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ತನ್ನ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಲು ಮುಂದಾಗಿದ್ದರೂ ಪಕ್ಷವು ಅದನ್ನು ಸರ್ವಾನುಮತದಿಂದ ತಿರಸ್ಕರಿಸಿದೆ.

ಈ ಸವಾಲಿನ ಸಮಯದಲ್ಲಿ ಮಾರ್ಗದರ್ಶನಕ್ಕಾಗಿ ನಮಗೆ ರಾಹುಲ್ ಗಾಂಧಿಯವರ ಅಗತ್ಯವಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಸಿಡಬ್ಲುಸಿ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಚುನಾವಣೆಯಲ್ಲಿ ಕೇವಲ 52 ಸ್ಥಾನಗಳು ದೊರಕಿರುವ ಆಘಾತದಲ್ಲಿರುವ ಕಾಂಗ್ರೆಸ್ ಸೋಲಿನ ಕುರಿತು ಚರ್ಚಿಸಲು ನಾಲ್ಕು ಗಂಟೆಗಳ ನಡೆದ ಸಭೆಯಲ್ಲಿ ಸೋಲಿನ ನೈತಿಕ ಹೊಣೆಯನ್ನು ಹೊತ್ತುಕೊಂಡ ರಾಹುಲ್ ಅವರ ‘ತಪ್ಪೊಪ್ಪಿಗೆ’ಗೆ ಸಿದ್ಧ ಮಾದರಿಯಲ್ಲಿ ಪ್ರತಿಕ್ರಿಯಿಸಿತು. ರಾಹುಲ್‌ರನ್ನು ಪ್ರಶಂಸಿಸಿದ ಪಕ್ಷದ ನಾಯಕರು ಪಕ್ಷದ ಸಂಪೂರ್ಣ ಪುನಃಶ್ಚೇತನಕ್ಕೆ ಅವರಿಗೆ ಅಧಿಕಾರ ನೀಡಿದರು.

ಈ ಬಾರಿಯ ಚುನಾವಣೆಯಲ್ಲಿ ರಾಹುಲ್ ಮತ್ತು ಅವರ ಸೋದರಿ ಪ್ರಿಯಾಂಕಾ ಗಾಂಧಿ ಅವರು ರಾಷ್ಟ್ರಾದ್ಯಂತ ವ್ಯಾಪಕ ಪ್ರಚಾರ ನಡೆಸಿದ್ದರಾದರೂ ಅಂತಿಮ ಫಲಿತಾಂಶ ತೀರ ನಿರಾಶಾದಾಯಕವಾಗಿದೆ. ಸ್ವ್ವತಃ ರಾಹುಲ್ ತನ್ನ ಭದ್ರಕೋಟೆಯಾಗಿದ್ದ ಅಮೇಠಿಯಲ್ಲಿ ಸೋಲನ್ನಪ್ಪಿದ್ದು,ಕೇರಳದ ವಯನಾಡಿನಲ್ಲಿ ಗೆಲ್ಲುವ ಮೂಲಕ ಕೊಂಚ ಸಮಾಧಾನ ಕಂಡುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಆರಂಭಿಸಿದ್ದ ‘ಚೌಕಿದಾರ ಚೋರ್ ಹೈ’ ಅಭಿಯಾನವು ಜನರನ್ನು ಮತ್ತು ಮತಗಳನ್ನು ಸೆಳೆಯುವಲ್ಲಿ ವಿಫಲಗೊಂಡಿತ್ತು. ಕಳೆದ ಲೋಕಸಭೆಯಲ್ಲಿ 44 ಸದಸ್ಯರನ್ನು ಹೊಂದುವ ಮೂಲಕ ತನ್ನ ಐತಿಹಾಸಿಕ ಪತನವನ್ನು ಕಂಡಿದ್ದ ಕಾಂಗ್ರೆಸ್ ಈ ಬಾರಿ 52 ಸ್ಥಾನಗಳನ್ನು ಗಳಿಸಿದೆ. ಈ ಅವಧಿಯಲ್ಲಿಯೂ ಅದು ಪ್ರತಿಪಕ್ಷ ನಾಯಕ ಸ್ಥಾನದಿಂದ ವಂಚಿತವಾಗಲಿದೆ.

 ತನ್ಮಧ್ಯೆ ಸೋಲಿಗೆ ಗೂಬೆ ಕೂರಿಸುವ ಕಾಯಕ ಪಕ್ಷದ ರಾಜ್ಯ ವರಿಷ್ಠರಿಗೂ ಬಿಸಿ ಮುಟ್ಟಿಸಿದೆ. ಅವರೆಲ್ಲ ಸೋಲಿನ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದು,ಹುದ್ದೆಯಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ. ಮೂವರು ಈಗಾಗಲೇ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News