ತಲಪಾಡಿ ಟೋಲ್ ಬಳಿ ವಿಜಯೋತ್ಸವ ವಿವಾದ, ಘರ್ಷಣೆ: ಲಾಠಿ ಚಾರ್ಜ್, ವಾಹನಗಳು ಪೊಲೀಸ್ ವಶಕ್ಕೆ

Update: 2019-05-25 17:27 GMT

ಉಳ್ಳಾಲ: ಕೇರಳದ ಕಾಸರಗೋಡು ಲೋಕಸಭಾ ಕೇತ್ರದಲ್ಲಿ ಯುಡಿಎಫ್ ಬೆಂಬಲಿತ ಅಭ್ಯರ್ಥಿ ರಾಜಮೋಹನ್ ಉನ್ನಿತ್ತಾನ್ ಸಂಸದರಾಗಿ ಆಯ್ಕೆಗೊಂಡಿದ್ದು, ಈ  ಹಿನ್ನೆಲೆಯಲ್ಲಿ ಮಂಜೇಶ್ವರದ ಲೀಗ್ ಕಾರ್ಯಕರ್ತರು ಧ್ವಜದೊಂದಿಗೆ ಕರ್ನಾಟಕ ಗಡಿಭಾಗ ತಲಪಾಡಿಯಲ್ಲಿ ವಿಜಯೋತ್ಸವ ಆಚರಿಸಲು ಆಗಮಿಸಿದ್ದು ಈ ಸಂದರ್ಭದಲ್ಲಿ ಉಳ್ಳಾಲ ಪೊಲೀಸರು  ಹಾಗೂ ಯುಡಿಎಫ್ ಕಾರ್ಯಕರ್ತರು ನಡುವೆ ವಾಗ್ವಾದ ಘರ್ಷಣೆ ನಡೆದ ಘಟನೆ ಶನಿವಾರ ಸಂಜೆ ನಡೆದಿದೆ.

ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಪೊಲೀಸರು ಲಾಠಿ ಚಾರ್ಜ್ ನಡೆಸಿ ವಾಹನಗಳನ್ನು ವಶಪಡಿಸಿಕೊಡಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಕೇರಳದ ತೂಮಿನಾಡು ಕಡೆಯಿಂದ ಕರ್ನಾಟಕದ ತಲಪಾಡಿ ಟೋಲ್ ಗೇಟ್ ಸಮೀಪಕ್ಕೆ ಬಂದ ಯುಡಿಎಫ್‍ನ ನಾಲ್ವರು ಬೈಕ್ ಸವಾರರು ಘೋಷಣೆಗಳನ್ನು ಕೂಗುತ್ತಾ ಬಂದಿದ್ದರು. ಅದನ್ನು ತಲಪಾಡಿ ನಿವಾಸಿಗಳು ವಿರೋಧಿಸಿದಾಗ ಮಾತಿನ ಚಕಮಕಿ ನಡೆದಿದ್ದು ಎರಡು ಬೈಕ್‍ನಲ್ಲಿ ಬಂದವರು ವಾಪಾಸ್ಸಾಗಿದ್ದರು. ಕೆಲ ಹೊತ್ತಿನ ನಂತರ ಕೇರಳದ ಪೊಲೀಸರ ವಾಹನ ತಲಪಾಡಿಗೆ ಬಂದು ಅಲ್ಲಿ ಸೇರಿದ್ದ ಯುವಕರನ್ನು ತೆರಳುವಂತೆ ಸೂಚಿಸಿದ್ದಾರೆ. ಆ ಬಳಿಕ ಮತ್ತೆ ಸುಮಾರು 50 ಬೈಕ್‍ಗಳಲ್ಲಿ ತಲಪಾಡಿಗೆ ತಂಡ ಬರುತ್ತಿರುವುದಾಗಿ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ತಲಪಾಡಿ ಭಾಗಕ್ಕೆ ಆಗಮಿಸಿದ್ದಾರೆ.  ಬೈಕ್‍ಗಳಲ್ಲಿ ಬಂದ ಲೀಗ್ ಕಾರ್ಯಕರ್ತರು ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದ್ದು ಬಳಿಕ ಸ್ಥಳದಲ್ಲಿ ಬಿಗು ವಾತಾವರಣ ನಿರ್ಮಾಣವಾಯಿತು ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಹಲವು ದ್ವಿಚಕ್ರ ವಾಹನಗಳು ಹಾಗೂ ಧ್ವಜಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಸ್‍ಗೆ ಕಲ್ಲೆಸೆದು ಹಾನಿ : ಚಿಕ್ಕಮಗಳೂರಿನ ಮೂಡಿಗೆರೆಯಿಂದ ತ್ರಿಕ್ಕರಿಪುರ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಬಸ್ಸಿಗೆ ಗಡಿಪ್ರದೇಶದಲ್ಲಿ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕಾಗಮಿಸಿದ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರು ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕೇರಳ ಪೊಲೀಸರಿಗೆ, ಉಳ್ಳಾಲ ಪೊಲೀಸರಿಗೆ ಸೂಚಿಸಿದರು.  ಸ್ಥಳದಲ್ಲಿ ಡಿಸಿಪಿ ಹನುಮಂತರಾಯ, ಎಸಿಪಿ ರಾಮರಾವ್, ಎಸ್.ಐ ಗೋಪಿಕೃಷ್ಣ ಟಿ.ಆರ್, ಎಸ್.ಐ ಗುರುವಪ್ಪ ಕಾಂತಿ ಸಹಿತ ನಾಲ್ಕು ಕೆಎಸ್‍ಆರ್ ಪಿ ಪೊಲೀಸ್ ಪಡೆಯನ್ನು ಸೂಕ್ತ ಬಂದೋಬಸ್ತಿಗೆ ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News