ಅನುಮತಿಯಿಲ್ಲದೆ ಪ್ರತಿಭಟನೆ : ಸಿಎಫ್ಐ ಕಾರ್ಯಕರ್ತರು ಪೊಲೀಸ್ ವಶಕ್ಕೆ

Update: 2019-05-25 18:23 GMT

ಬೆಳ್ತಂಗಡಿ: ಪೊಲೀಸ್ ಇಲಾಖೆಯ ಅನುಮತಿಯಿಲ್ಲದೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಕ್ಯಾಂಪಸ್ ಫ್ರೆಂಡ್ ಆಫ್ ಇಂಡಿಯಾದ ಕಾರ್ಯಕರ್ತರನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದ ಘಟನೆ ಶನಿವಾರ ಸಂಜೆ ಬೆಳ್ತಂಗಡಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಬೆಳ್ತಂಗಡಿಯ ಖಾಸಗಿ ಕಾಲೇಜೊಂದರಲ್ಲಿ ಇಂದು ಬೆಳಗ್ಗೆ ವಿಧ್ಯಾರ್ಥಿಯ ಮೇಲೆ ರಾಜಕೀಯ ಕಾರಣಕ್ಕೆ ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಹಲ್ಲೆಗೆ ಒಳಗಾದ ವಿದ್ಯಾರ್ಥಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿಂತೆ ಎರಡೂ ಕಡೆಯವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿಚಾರಕ್ಕೆ ಸಂಬಂಧಿಸಿಂತೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಎಫ್‍ಐ ಕಾರ್ಯಕರ್ತರು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಇಂದು ಸಂಜೆ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಮುಂದುವರಿಯುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಪೊಲೀಸರ ತಂಡ ಏಕಾಏಕಿ ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿ ಅವರನ್ನು ಚದುರಿಸಿದ್ದಾರೆ ಹಾಗೂ ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ.  ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ಪೊಲೀಸ್ ವಾಹನದಲ್ಲಿ  ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಲಾಠಿ ಬೀಸಿದಾಗ ಅಲ್ಲಿಂದ ಓಡಿದ ಪ್ರತಿಭಟನಾಕಾರರನ್ನು ಬೆನ್ನಟ್ಟಿದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭ ಪೊಲೀಸರು ಹಲ್ಲೆ ನಡೆಸಿರುವುದಾಗಿ ಕೆಲ ಕಾರ್ತಕರ್ತರು ಆರೋಪಿಸಿದ್ದಾರೆ.  ಪ್ರತಿಭಟನೆಗೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸಂಘಟನೆಯ ಮುಖಂಡರುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ತಿಳಿದು ಬಂದಿದೆ.

ಇದೀಗ ಎರಡೂ ಪ್ರಕರಣಗಳ ಬಗ್ಗೆ ಠಾಣೆಯಲ್ಲಿ ಮಾತುಕತೆ ನಡೆಯುತ್ತಿದ್ದು, ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ಪಡೆದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಖಂಡನೆ: ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಉಪವಾಸದಲ್ಲಿದ್ದ ಅವರ ಮೇಲೆ ಮಾನವೀಯತೆ ಮರೆತಿದ್ದಾರೆ. ಪೊಲೀಸರು ಬಂಧಿಸಿರುವ ಎಲ್ಲ ವಿದ್ಯಾರ್ಥಿಗಳನ್ನೂ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ಕೂಡಲೇ ನ್ಯಾಯ ಒದಗಿಸಬೇಕು ಎಂದು ಸಿಎಫ್‍ಐ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಸಾಧಿಕ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News