ವಿದ್ಯಾರ್ಥಿಗಳ ಮೇಲೆ‌ ಪೊಲೀಸ್ ದೌರ್ಜನ್ಯ: ಪಾಪ್ಯುಲರ್ ಫ್ರಂಟ್ ಖಂಡನೆ

Update: 2019-05-25 18:34 GMT

 ಬೆಳ್ತಂಗಡಿ: ಪ್ರತಿಭಟನಾ ನಿರತ ಅಮಾಯಕ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿರುವ ಪೊಲೀಸರ ಕ್ರೌರ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಹನೀಫ್ ಕಾಟಿಪಳ್ಳ  ಖಂಡಿಸಿರುವುದಾಗಿ ತಿಳಿಸಿದ್ದಾರೆ.

ಬೆಳ್ತಂಗಡಿಯ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಎಬಿವಿಪಿ ಕಾರ್ಯಕರ್ತರನ್ನು  ಬಂಧಿಸುವಂತೆ ಆಗ್ರಹಿಸಿ ಇಂದು ಸಂಜೆ ಬೆಳ್ತಂಗಡಿಯಲ್ಲಿ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪೊಲೀಸರಿಗೆ ಸೂಚನೆ ನೀಡಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಮನಸೋ ಇಚ್ಛೆ ಲಾಠಿಚಾರ್ಜ್ ನಡೆಸಿ ಅಟ್ಟಾಡಿಸಿದ್ದಾರೆ ಮತ್ತು  ಹಲವು ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಹಾಗೂ ಉಪವಾಸದಿಂದಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಈ ಅಮಾನುಷ ದೌರ್ಜನ್ಯವು ಪೊಲೀಸರ ಪೂರ್ವಾಗ್ರಹ ಮತ್ತು ಕೋಮುವಾದಿ ಮನೋಸ್ಥಿತಿಯನ್ನು ಮತ್ತೊಮ್ಮೆ ಜಾಹೀರುಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ವಿನಾ ಕಾರಣ ವಿದ್ಯಾರ್ಥಿಗಳ ಮೇಲೆ‌ ದೌರ್ಜನ್ಯ ನಡೆಸಿದ ಮತ್ತು ತಾರತಮ್ಯ ‌ಧೋರಣೆ‌ ಅನುಸರಿಸಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ, ಅವರ ‌ಮೇಲೆ‌ ಕಠಿಣ ಕಾನೂನು ಕ್ರಮ ಜರಗಿಸಬೇಕು. ನ್ಯಾಯಕ್ಕಾಗಿ ಆಗ್ರಹಿಸಿ ಅಕ್ರಮ ಬಂಧನಕ್ಕೊಳಗಾದ ವಿದ್ಯಾರ್ಥಿಗಳನ್ನು ಕೂಡಲೇ  ಬಿಡುಗಡೆಗೊಳಿಸಬೇಕು ಎಂದು ಹನೀಫ್ ಕಾಟಿಪಳ್ಳ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದು, ಘಟನೆಗೆ ಸಂಬಂಧಿಸಿ ಕ್ಯಾಂಪಸ್‌ ಫ್ರಂಟ್ ವಿದ್ಯಾರ್ಥಿಗಳ ಕಾನೂನಾತ್ಮಕ ಹೋರಾಟಕ್ಕೆ‌ ಪಾಪ್ಯುಲರ್ ಫ್ರಂಟ್ ದ.ಕ. ಜಿಲ್ಲಾ‌ ಸಮಿತಿಯು ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News