ಪಾಕಿಸ್ತಾನಕ್ಕೆ ಆಘಾತ ನೀಡಿದ ಅಫ್ಘಾನಿಸ್ತಾನ

Update: 2019-05-25 18:49 GMT

ಕಾರ್ಡಿಫ್, ಮೇ 25: ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿ ಶಾಕ್ ನೀಡಿದ ಅಫ್ಘಾನಿಸ್ತಾನ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಸಂದೇಶ ರವಾನಿಸಿದೆ.

   ಮಧ್ಯಮ ಕ್ರಮಾಂಕದ ಯುವ ದಾಂಡಿಗ ಹಶ್ಮತುಲ್ಲಾ ಶಾಹಿದಿ ಔಟಾಗದೆ 74 ರನ್ ಗಳಿಸಿ ಪಾಕಿಸ್ತಾನ ನೀಡಿದ್ದ 263 ರನ್ ಗುರಿಯನ್ನು ಇನ್ನೂ ಕೆಲವು ಎಸೆತ ಬಾಕಿ ಇರುವಾಗಲೇ ತಲುಪಲು ನೆರವಾಗಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿದ್ದ ಬೌಲರ್‌ಗಳಾದ ಮುಹಮ್ಮದ್ ನಬಿ(3-46) ಹಾಗೂ ರಶೀದ್ ಖಾನ್(2-27)ಪಾಕಿಸ್ತಾನವನ್ನು 300ರೊಳಗೆ ನಿಯಂತ್ರಿಸಿದರು. ನಬಿ ಶ್ರೇಷ್ಠ ಬೌಲಿಂಗ್‌ನ ಜೊತೆಗೆ 41 ಎಸೆತಗಳಲ್ಲಿ 34 ರನ್ ಗಳಿಸಿದ್ದರು. ಇದರಲ್ಲಿ 3 ಬೌಂಡರಿಗಳಿದ್ದವು. ತಾಳ್ಮೆಯ ಇನಿಂಗ್ಸ್ ಆಡಿದ ಶಾಹಿದಿ 102 ಎಸೆತಗಳಲ್ಲಿ 7 ಬೌಂಡರಿ ಬಾರಿಸಿದ್ದರು. ಆರಂಭಿಕ ಆಟಗಾರ ಹಝರ್ತುಲ್ಲಾ ಝಝೈ 28 ಎಸೆತಗಳಲ್ಲಿ 49 ರನ್ ಗಳಿಸಿ ಗಮನ ಸೆಳೆದರು. ಮುಹಮ್ಮದ್ ಶಹಝಾದ್ 23 ರನ್ ಗಳಿಸಿ ಗಾಯಗೊಂಡು ನಿವೃತ್ತಿಯಾದರು.

ಪಾಕ್ ವೇಗದ ಬೌಲರ್ ಮುಹಮ್ಮದ್ ಆಮಿರ್ 6 ಓವರ್‌ಗಳಲ್ಲಿ 27 ರನ್ ನೀಡಿದರೂ ವಿಕೆಟ್ ಪಡೆಯಲು ವಿಫಲರಾದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ ಬಾಬರ್ ಆಝಂ(112 ರನ್, 108 ಎಸೆತ)ಶತಕದ ಬೆಂಬಲದಿಂದ 47.5 ಓವರ್‌ಗಳಲ್ಲಿ 262 ರನ್ ಗಳಿಸಿತು. ಶುಐಬ್ ಮಲಿಕ್ 44 ರನ್ ಗಳಿಸಿದರು.

ಗೆಲ್ಲಲು 263 ರನ್ ಗುರಿ ಪಡೆದಿದ್ದ ಅಫ್ಘಾನಿಸ್ತಾನ 49.4 ಓವರ್‌ಗಳಲ್ಲಿ 263 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಶ್ರೀಲಂಕಾವನ್ನು ಸೋಲಿಸಿದ ದ.ಆಫ್ರಿಕ: ನಾಯಕ ಎಫ್ ಡು ಪ್ಲೆಸಿಸ್ ಅರ್ಧಶತಕ(88) ಹಾಗೂ ಅಂಡಿಲೆ ಫೆಹ್ಲುಕ್ವಾವೊ ಅವರ ಆಲ್‌ರೌಂಡ್ ಪ್ರಯತ್ನದ ಫಲವಾಗಿ ದಕ್ಷಿಣ ಆಫ್ರಿಕ ತಂಡ ಶುಕ್ರವಾರ ನಡೆದ ವಿಶ್ವಕಪ್‌ನ ಮತ್ತೊಂದು ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾವನ್ನು 87 ರನ್‌ಗಳಿಂದ ಮಣಿಸಿತು.

 ಮೊದಲು ಬ್ಯಾಟಿಂಗ್ ಮಾಡಿದ ದ.ಆಫ್ರಿಕ 7 ವಿಕೆಟ್‌ಗಳ ನಷ್ಟಕ್ಕೆ 338 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಶ್ರೀಲಂಕಾ 42.3 ಓವರ್‌ಗಳಲ್ಲಿ 251 ರನ್‌ಗೆ ಆಲೌಟಾಯಿತು. ಫೆಹ್ಲುಕ್ವಾವೊ 7 ಓವರ್‌ಗಳಲ್ಲಿ 36 ರನ್‌ಗೆ 4 ವಿಕೆಟ್ ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News