ಮೊದಲ ಅನಧಿಕೃತ ಟೆಸ್ಟ್: ಪಾಂಚಾಲ್, ಈಶ್ವರನ್ ಶತಕ

Update: 2019-05-25 18:52 GMT

ಬೆಳಗಾವಿ, ಮೇ 25: ಆರಂಭಿಕ ಆಟಗಾರರಾದ ಪ್ರಿಯಾಂಕ್ ಪಾಂಚಾಲ್ ಹಾಗೂ ಅಭಿಮನ್ಯು ಈಶ್ವರನ್ ಶತಕ ಗಳಿಸುವ ಮೂಲಕ ಭಾರತ ‘ಎ’ ತಂಡ ಶ್ರೀಲಂಕಾ ‘ಎ’ ವಿರುದ್ಧ ಪ್ರಥಮ ಅನಧಿಕೃತ ಟೆಸ್ಟ್‌ನ ಮೊದಲ ದಿನವಾದ ಶನಿವಾರ 1 ವಿಕೆಟ್ ನಷ್ಟಕ್ಕೆ 376 ರನ್ ಗಳಿಸಲು ನೆರವಾಗಿದ್ದಾರೆ.

ದಿನದಾಟದಂತ್ಯಕ್ಕೆ ಈಶ್ವರನ್ 250 ಎಸೆತಗಳಲ್ಲಿ ಔಟಾಗದೆ 189 ರನ್ ಗಳಿಸಿದ್ದು, ಇದರಲ್ಲಿ 17 ಬೌಂಡರಿ ಹಾಗೂ 3 ಸಿಕ್ಸರ್‌ಗಳಿವೆ. ಪಾಂಚಾಲ್(190, 261 ಎಸೆತ) ಹಾಗೂ ಈಶ್ವರನ್ ಮೊದಲ ವಿಕೆಟ್‌ಗೆ 352 ರನ್ ಜೊತೆಯಾಟ ನಡೆಸಿದ್ದಾರೆ. ಬೆಳಗಾವಿಯ ಮೈದಾನದಲ್ಲಿ ತನ್ನ ಉತ್ತಮ ಪ್ರದರ್ಶನ ಮುಂದುವರಿಸಿದ ಪಾಂಚಾಲ್ ಎರಡನೇ ಶತಕ ಸಿಡಿಸಿದರು. 2016ರ ಡಿಸೆಂಬರ್‌ನಲ್ಲಿ ನಡೆದಿದ್ದ ರಣಜಿ ಟ್ರೋಫಿ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 113 ರನ್ ಗಳಿಸಿದ್ದರು.

 ಪಾಂಚಾಲ್ ರಣಜಿ ಋತುವಿನಲ್ಲಿ 1,000 ರನ್ ಗಳಿಸಿದ ಗುಜರಾತ್‌ನ ಮೊದಲ ದಾಂಡಿಗ ಎನಿಸಿಕೊಂಡಿದ್ದರು. ಪಾಂಚಾಲ್ 262 ಎಸೆತಗಳ ಇನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ‘ಎ’ ಪರ ಪಾಂಚಾಲ್ ಹಾಗೂ ಈಶ್ವರನ್ ಲಂಚ್ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 113 ರನ್ ಗಳಿಸಿದರು. ಲಂಚ್ ವಿರಾಮದ ಬಳಿಕ ಇಬ್ಬರೂ ಆರಂಭಿಕರು ಇನ್ನೂ 125 ರನ್ ಸೇರಿಸಿದರು. ಟೀ ವಿರಾಮದ ವೇಳೆಗೆ ಪಾಂಚಾಲ್ ಹಾಗೂ ಈಶ್ವರನ್ ಕ್ರಮವಾಗಿ 101 ಹಾಗೂ 125 ರನ್ ಗಳಿಸಿದ್ದರು. ಈ ಇಬ್ಬರು ಆರಂಭಿಕರು ಶ್ರೀಲಂಕಾದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಪಾಂಚಾಲ್ ಅವರು ವಿಶ್ವ ಫೆರ್ನಾಂಡೊ ಬೌಲಿಂಗ್‌ನಲ್ಲಿ ನಿರೊಶನ್ ಡಿಕ್‌ವೆಲ್ಲಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News