ವಿಶ್ವಕಪ್ ನೆನಪು: ಐದು ಟಾಪ್ ಸ್ಕೋರರ್ ಗಳು
ಹೊಸದಿಲ್ಲಿ, ಮೇ 25: ಈ ವರ್ಷದ ವಿಶ್ವಕಪ್‌ನಲ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿ ತಂಡವೊಂದರಿಂದ 500 ರನ್ ದಾಖಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇಂಗ್ಲೆಂಡ್‌ನ ವಾತಾವರಣದಲ್ಲಿ ಫಾರ್ಮ್‌ನಲ್ಲಿರುವ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ, ಆ್ಯಂಡ್ರೆ ರಸೆಲ್, ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋವ್ ಹಾಗೂ ಇತರರು ಅಬ್ಬರಿಸುವ ಸಾಧ್ಯತೆಯಿದೆ.
ವಿಶ್ವಕಪ್‌ನಲ್ಲಿ ಈ ತನಕ ಗರಿಷ್ಠ ಸ್ಕೋರ್ ಗಳಿಸಿದ ಅಗ್ರ-ಐವರು ದಾಂಡಿಗರ ವಿವರ ಇಂತಿದೆ.
►ಸಚಿನ್ ತೆಂಡುಲ್ಕರ್(ಭಾರತ)
ರನ್: 2,278, ಪಂದ್ಯಗಳು: 45, ಇನಿಂಗ್ಸ್ 44
ಒಂದೇ ಆವೃತ್ತಿಯ ವಿಶ್ವಕಪ್‌ನಲ್ಲಿ ಗರಿಷ್ಠ ಶತಕ, ಗರಿಷ್ಠ ಅರ್ಧಶತಕ ಹಾಗೂ ಒಂದೇ ಆವೃತ್ತಿಯ ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಗಳಿಸಿರುವ ತೆಂಡುಲ್ಕರ್ 1992ರಿಂದ 2011ರ ತನಕ ಆಡಿರುವ ಎಲ್ಲ ಆರು ವಿಶ್ವಕಪ್‌ಗಳಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿದ್ದರು. 2011ರಲ್ಲಿ ಕೊನೆಗೂ ವಿಶ್ವಕಪ್ ಗೆಲ್ಲುವ ಕನಸು ಈಡೇಸಿಕೊಂಡರು. 1996ರಲ್ಲಿ ಕೀನ್ಯ ವಿರುದ್ಧ ಔಟಾಗದೆ 127 ರನ್ ಗಳಿಸಿ ವಿಶ್ವಕಪ್‌ನಲ್ಲಿ ಮೊದಲ ಶತಕವನ್ನು ಸಿಡಿಸಿದ್ದ ತೆಂಡುಲ್ಕರ್ ಇನ್ನೂ 5 ಶತಕಗಳನ್ನು ಗಳಿಸಿದ್ದು, 45 ವಿಶ್ವಕಪ್ ಪಂದ್ಯಗಳಲ್ಲಿ 2,278 ರನ್ ಗಳಿಸಿದ್ದಾರೆ. 15 ಅರ್ಧಶತಕ ವಿಶ್ವಕಪ್‌ನಲ್ಲಿ ದಾಖಲೆಯಾಗಿ ಉಳಿದಿದೆ. 2003ರ ವಿಶ್ವಕಪ್‌ನಲ್ಲಿ ಆಡಿರುವ 11 ಪಂದ್ಯಗಳ ಪೈಕಿ ತೆಂಡುಲ್ಕರ್ 673 ರನ್ ಗಳಿಸಿದ್ದರು. ಒಂದೇ ಆವೃತ್ತಿಯ ವಿಶ್ವಕಪ್‌ನಲ್ಲಿ ದಾಖಲಾದ ಗರಿಷ್ಠ ರನ್ ಇದಾಗಿದೆ.
►ರಿಕಿ ಪಾಂಟಿಂಗ್(ಆಸ್ಟ್ರೇಲಿಯ)
ರನ್: 1,743, ಪಂದ್ಯಗಳು: 46, ಇನಿಂಗ್ಸ್: 42
ವಿಶ್ವಕಪ್‌ನ ಓರ್ವ ಯಶಸ್ವಿ ನಾಯಕನಾಗಿರುವ ರಿಕಿ ಪಾಂಟಿಂಗ್ ಎರಡು ವಿಶ್ವಕಪ್‌ನ್ನು ಜಯಿಸಿ ವೆಸ್ಟ್ ಇಂಡೀಸ್‌ನ ದಂತಕತೆ ಕ್ಲೈವ್ ಲಾಯ್ಡ್‌ರೊಂದಿಗೆ ದಾಖಲೆ ಹಂಚಿಕೊಂಡಿದ್ದಾರೆ. ಈ ಬಾರಿ ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ವಿಶ್ವಕಪ್‌ನಲ್ಲಿ ಆಡಿರುವ 46 ಪಂದ್ಯಗಳಲ್ಲಿ ಒಟ್ಟು 1,743 ರನ್ ಗಳಿಸಿರುವ ಪಾಂಟಿಂಗ್ 5 ಶತಕ ಹಾಗೂ ಆರು ಅರ್ಧಶತಕಗಳನ್ನು ಸಿಡಿಸಿದ್ದರು. ಪಾಂಟಿಂಗ್ ವಿಶ್ವಕಪ್‌ನಲ್ಲಿ ಗರಿಷ್ಠ ಪಂದ್ಯಗಳನ್ನು ಆಡಿದ ಏಕೈಕ ಆಟಗಾರ.
1996ರಿಂದ 2011ರ ತನಕ ಐದು ಆವೃತ್ತಿ ವಿಶ್ವಕಪ್‌ಗಳಲ್ಲಿ ಆಡಿದ್ದರು. 2007ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆಗ ಅವರು 11 ಪಂದ್ಯಗಳಲ್ಲಿ 539 ರನ್ ಗಳಿಸಿದ್ದರು. ಈ ಮೂಲಕ ಆಸ್ಟ್ರೇಲಿಯ 4ನೇ ಬಾರಿ ವಿಶ್ವಕಪ್ ಜಯಿಸಲು ನೆರವಾಗಿದ್ದರು.
►ಕುಮಾರ ಸಂಗಕ್ಕರ (ಶ್ರೀಲಂಕಾ)
ರನ್: 1,532, ಪಂದ್ಯಗಳು: 37, ಇನಿಂಗ್ಸ್: 35
ದ್ವೀಪರಾಷ್ಟ್ರದ ಓರ್ವ ಶ್ರೇಷ್ಠ ದಾಂಡಿಗ ಸಂಗಕ್ಕರ ವಿಶ್ವಕಪ್‌ನಲ್ಲಿ ಆಡಿದ್ದ 37 ಪಂದ್ಯಗಳಲ್ಲಿ 1,532 ರನ್ ಗಳಿಸಿದ್ದು, ಪಾಂಟಿಂಗ್‌ಗಿಂತಲೂ ಉತ್ತಮ ಸರಾಸರಿ(56.74)ಕಾಯ್ದುಕೊಂಡಿದ್ದರು. 4 ವಿಶ್ವಕಪ್‌ಗಳಲ್ಲಿ ಆಡಿರುವ ಅವರು ಐದು ಶತಕಗಳನ್ನು ಸಿಡಿಸಿದ್ದರು. 2015ರಲ್ಲಿ ಸತತ 3 ಶತಕಗಳನ್ನು ಸಿಡಿಸಿದ್ದ ಅವರು ಇನ್ನೊಂದು ಶತಕ ಗಳಿಸಿ ತನ್ನದೇ ದಾಖಲೆ ಉತ್ತಮಪಡಿಸಿಕೊಂಡಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಸತತ 4 ಶತಕ ಸಿಡಿಸಿದ್ದರು. ಕೇವಲ 7 ಪಂದ್ಯಗಳಲ್ಲಿ 108.20ರ ಸರಾಸರಿಯಲ್ಲಿ 541 ರನ್ ಗಳಿಸಿದ್ದರು. ಲಂಕಾದ ಮಾಜಿ ವಿಕೆಟ್‌ಕೀಪರ್ ಸಂಗಕ್ಕರ 7 ಬಾರಿ ಅರ್ಧಶತಕವನ್ನು ಸಿಡಿಸಿದ್ದರು.
►ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
ರನ್: 1,225, ಪಂದ್ಯಗಳು: 34, ಇನಿಂಗ್ಸ್: 33
ಕ್ರಿಕೆಟ್‌ನ ಓರ್ವ ಶ್ರೇಷ್ಠ ದಾಂಡಿಗ ಲಾರಾ 1992ರಿಂದ 2007ರ ತನಕ ಐದು ಬಾರಿ ವಿಶ್ವಕಪ್‌ನಲ್ಲಿ ಆಡಿದ್ದರೂ ಟ್ರೋಫಿ ಜಯಿಸದ ನೋವು ಅವರನ್ನು ಕಾಡಿತ್ತು. 34 ಪಂದ್ಯಗಳಲ್ಲಿ 1,225 ರನ್ ಗಳಿಸಿದ್ದರು. ಇದರಲ್ಲಿ 2 ಶತಕ ಹಾಗೂ 7 ಅರ್ಧಶತಕಗಳಿವೆ. ತನ್ನ ಮೊದಲ ವಿಶ್ವಕಪ್‌ನಲ್ಲಿ 8 ಪಂದಗಳಲ್ಲಿ 333 ರನ್ ಗಳಿಸಿದ್ದರು. ಅವರ ಅವಧಿಯಲ್ಲಿ ವಿಂಡೀಸ್ 1996ರಲ್ಲಿ ಮಾತ್ರ ಸೆಮಿಫೈನಲ್‌ಗೆ ತಲುಪಿತ್ತು.
►ಎಬಿಡಿ ವಿಲಿಯರ್ಸ್ (ದ.ಆಫ್ರಿಕ)
ರನ್: 1,207, ಪಂದ್ಯಗಳು: 23, ಇನಿಂಗ್ಸ್: 22
ವಿಶ್ವಕಪ್‌ನಲ್ಲಿ ಶ್ರೇಷ್ಠ ಬ್ಯಾಟಿಂಗ್ ಸರಾಸರಿ ಹೊಂದಿರುವ ಎಬಿಡಿ ವಿಲಿಯರ್ಸ್ 2007ರ ಆವೃತ್ತಿಯ ವಿಶ್ವಕಪ್‌ನಲ್ಲಿ ಆಡುವುದರಿಂದ ವಂಚಿತರಾಗಿದ್ದರು. 2018ರ ಮೇನಲ್ಲಿ ನಿವೃತ್ತಿಯಾಗಿದ್ದರು. ವಿಶ್ವಕಪ್‌ನಲ್ಲಿ 23 ಪಂದ್ಯಗಳನ್ನು ಆಡಿದ್ದ ಅವರು 63.52ರ ಸರಾಸರಿಯಲ್ಲಿ 1,207 ರನ್ ಗಳಿಸಿದ್ದರು. ದ.ಆಫ್ರಿಕದ ಪರ 3 ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿದ್ದ ಅವರು 4 ಶತಕ ಹಾಗೂ 6 ಅರ್ಧಶತಕ ದಾಖಲಿಸಿದ್ದರು. 2015ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೇವಲ66 ಎಸೆತಗಳಲ್ಲಿ 162 ರನ್ ಗಳಿಸಿ ಸ್ಮರಣೀಯ ಪ್ರದರ್ಶನ ನೀಡಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 150 ಪ್ಲಸ್ ಸ್ಕೋರ್ ಗಳಿಸಿದ್ದ ಅವರು ದ.ಆಫ್ರಿಕ 5ಕ್ಕೆ 408 ರನ್ ಗಳಿಸಲು ನೆರವಾಗಿದ್ದರು. 2015ರ ವಿಶ್ವಕಪ್‌ನಲ್ಲಿ 8 ಪಂದ್ಯಗಳಲ್ಲಿ 482 ರನ್ ಗಳಿಸಿದ್ದರು.