ಭಾರತಕ್ಕೆ ಏಕೈಕ ಪದಕ
ಅಂಟಾಲಿಯಾ(ಟರ್ಕಿ), ಮೇ 25: ಆರ್ಚರಿ ವಿಶ್ವಕಪ್‌ನ ಮೂರನೇ ಹಂತದಲ್ಲಿ ರಜತ್ ಚೌಹಾಣ್, ಅಭಿಷೇಕ್ ವರ್ಮಾ ಹಾಗೂ ಅಮಾನ್ ಸೈನಿ ಅವರನ್ನೊಳಗೊಂಡ ಪುರುಷರ ಕಾಂಪೌಂಡ್ ತಂಡ ಭಾರತಕ್ಕೆ ಏಕೈಕ ಕಂಚಿನ ಪದಕ ಗೆದ್ದುಕೊಟ್ಟಿದೆ. ಉತ್ತಮ ಪ್ರದರ್ಶನ ನೀಡಿದ ಚೌಹಾಣ್, ವರ್ಮಾ ಹಾಗೂ ಸೈನಿ ಕಂಚಿನ ಪದಕಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ರಶ್ಯದ ಅಗ್ರ ಶ್ರೇಯಾಂಕದ ಅಂಟನ್ ಬುಲಾಯೆವ್, ಅಲೆಕ್ಸಾಂಡರ್ ಡಂಬಾವ್ ಹಾಗೂ ಪಾವೆಲ್ ಕ್ರಿಲೊವ್ ವಿರುದ್ಧ 235-230 ಅಂತರದಿಂದ ಜಯ ಸಾಧಿಸಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಮತ್ತೊಂದು ಪ್ಲೇ-ಆಫ್ ಪಂದ್ಯದಲ್ಲಿ ಜ್ಯೋತಿ ಸುರೇಖಾ, ಮಸ್ಕಾನ್ ಕಿರಾರ್ ಹಾಗೂ ಸ್ವಾತಿ ದುಧ್ವಾಲ್ ಅವರಿದ್ದ ಭಾರತದ ಮಹಿಳಾ ತಂಡ ಗ್ರೇಟ್ ಬ್ರಿಟನ್‌ನ ಲಾಯ್ಲಿ ಅನ್ನಿಸನ್, ಎಲ್ಲಾ ಗಿಬ್ಸನ್ ಹಾಗೂ ಲೂಸಿ ಮಾಸನ್ ವಿರುದ್ಧ ಎರಡು ಅಂಕದ ಅಂತರದಿಂದ (226-228)ಸೋತಿದ್ದಾರೆ.
ಭಾರತೀಯ ಆರ್ಚರಿಗಳು ರಿಕರ್ವ್ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಲು ವಿಫಲರಾದರು. ಹಾಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗಿಂತ ಮೊದಲು ಮೂರನೇ ಹಂತದ ವಿಶ್ವಕಪ್ ಟೂರ್ನಿಯು ಒಲಿಂಪಿಕ್ಸ್ ಅರ್ಹತೆಗಿರುವ ಕೊನೆಯ ಟೂರ್ನಿಯಾಗಿದೆ.