ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸುಳ್ಳು ಜಾಹೀರಾತುಗಳ ವಿರುದ್ಧ ವೈದ್ಯ ಸಾಹಿತ್ಯ ಮೊಳಗಬೇಕು: ಡಾ.ಎಸ್.ಸಚ್ಚಿದಾನಂದ

Update: 2019-05-26 08:50 GMT

ಮಂಗಳೂರು, ಮೇ 26: ದೃಶ್ಯ, ಶ್ರವಣ, ಮುದ್ರಣ ಮಾಧ್ಯಮಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಪ್ರಸಾರ ಮತ್ತು ಪ್ರಕಟಗೊಳ್ಳುವ ಸುಳ್ಳು ಜಾಹೀರಾತುಗಳ ವಿರುದ್ಧ ವೈದ್ಯ ಸಾಹಿತ್ಯ ಮೊಳಗಬೇಕಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ ಕರೆ ನೀಡಿದರು.

ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಘಟಕದ ವತಿಯಿಂದ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಆಶ್ರಯ ಮತ್ತು ಸಂಘದ ಕನ್ನಡ ವೈದ್ಯ ಬರಹಗಾರರ ಬಳಗದ ಸಹಯೋಗದೊಂದಿಗೆ ನಗರದ ಐಎಂಎ ಹಾಲ್‌ನ ಡಾ.ಎಂ.ಶಿವರಾಮ್ ವೇದಿಕೆಯಲ್ಲಿ ರವಿವಾರ ಜರುಗಿದ ಕನ್ನಡ ವೈದ್ಯ ಬರಹಗಾರರ ಪ್ರಥಮ ರಾಜ್ಯ ಸಮ್ಮೇಳನ ಮತ್ತು ಶ್ರೇಷ್ಠ ವೈದ್ಯ ಸಾಹಿತಿ 2018 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರೆಂದರೆ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ವ್ಯವಹರಿಸುವವರು ಎಂಬ ತಪ್ಪು ಕಲ್ಪನೆ ಜನಸಾಮಾನ್ಯರಲ್ಲಿದೆ. ಅದನ್ನು ಹೋಗಲಾಡಿಸಲು ಸ್ವತಃ ವೈದ್ಯರೇ ಮುಂದಾಗಬೇಕಿದೆ. ವೈದ್ಯರು ಕನ್ನಡದಲ್ಲೂ ವ್ಯವಹರಿಸಬಲ್ಲರು, ಬರೆಯಬಲ್ಲರು, ಯೋಚಿಸಬಲ್ಲರು ಎಂಬುದಕ್ಕೆ ಇಂತಹ ಸಮ್ಮೇಳನಗಳ ಮೂಲಕ ಜನತೆಗೆ ತೋರಿಸಬೇಕಿದೆ. 1980ರಿಂದ ಕನ್ನಡದಲ್ಲಿ ವೈದ್ಯ ಸಾಹಿತ್ಯ ಶ್ರೀಮಂತವಾಗುತ್ತಿದೆ. ಆರೋಗ್ಯಕ್ಕೆ ಸಂಬಂಧಿ ಸಿದಂತೆ ಯುವ ಸಾಹಿತಿಗಳು ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ. ಇಂತಹ ಸಂದರ್ಭ ಸುಳ್ಳು ಜಾಹೀರಾತುಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಡಾ. ಎಸ್. ಸಚ್ಚಿದಾನಂದ ನುಡಿದರು.

ಕನ್ನಡದ ಬಗ್ಗೆ ಆರಂಭದಿಂದಲೂ ಒಲವು ಹೊಂದಿದ್ದ ನಾನು ಕುಲಪತಿ ಆದ ಬಳಿಕ ಇಂಗ್ಲಿಷ್‌ನಲ್ಲೇ ಭಾಷಣ ಮಾಡುವುದು ಅನಿವಾರ್ಯವಾಗಿದೆ. ಆದರೆ, ಇಂದು ಆ ಅನಿವಾರ್ಯತೆಯಿಂದ ಹೊರಬಂದು ಮುಕ್ತವಾಗಿ ಕನ್ನಡ ಮನಸ್ಸಿನೊಂದಿಗೆ ಬೆರೆಯುತ್ತಿದ್ದೇನೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯಲ್ಲಿ ವೈದ್ಯ ಸಾಹಿತ್ಯ ಕಮ್ಮಟ, ವೈದ್ಯ ಕೃತಿಗಳ ಪ್ರಕಟನೆ, ವೈದ್ಯ ಸಾಹಿತ್ಯ ಸಮ್ಮೇಳನ ನಡೆಸಲು ಆಸಕ್ತಿ ಹೊಂದಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಡಾ. ಎಸ್. ಸಚ್ಚಿದಾನಂದ ನುಡಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಮನು ಬಳಿಗಾರ್ ಆಶಯ ಭಾಷಣಗಳನ್ನು ಮಾಡಿದರು. ಡಾ.ಎಸ್ಪಿ ಯೋಗಣ್ಣ ಮೈಸೂರು ಸರ್ವಾಧ್ಯಕ್ಷತೆ ವಹಿಸಿದ್ದರು. ಕಸಾಪ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಸಂಘದ ಕಾರ್ಯದರ್ಶಿ ಡಾ. ಸುಧೀಂದ್ರ ರಾವ್ ಎಂ. ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ ಸ್ವಾಗತಿಸಿದರು. ಸಮ್ಮೇಳನಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಡಾ.ಅಣ್ಣಯ್ಯ ಕುಲಾಲ್ ಎಂ. ಉಳ್ತೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಔಷಧ ಉತ್ಪಾದಕರ ಜಾಲದ ವಿರುದ್ಧ ಹೋರಾಡಬೇಕು

ವೈದ್ಯರು ಪ್ರತೀ ದಿನವು ಒಂದಲ್ಲೊಂದು ಒತ್ತಡ, ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಔಷಧ ಉತ್ಪಾದಕರ ದೊಡ್ಡ ಜಾಲವು ರೋಗಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಹೊರಟಿವೆ. ಈ ಸಂದರ್ಭ ವೈದ್ಯರು ಈ ಕಾಲದ ವಿರುದ್ಧ ಸೆಟೆದು ನಿಲ್ಲಬೇಕಿದೆ. ವೈದ್ಯಕೀಯ ಶಿಕ್ಷಣ ಪಠ್ಯಕ್ರಮವೂ ಗುಣಮಟ್ಟದಿಂದ ಕೂಡಿಲ್ಲ. ಅದರ ಅಧಃಪತನವು ತಲ್ಲಣ ಮೂಡಿಸಿವೆ. ಈ ಸಂದರ್ಭ ವೈದ್ಯರು ಮಾನವೀಯ ಮೌಲ್ಯಕ್ಕೆ ಒತ್ತು ನೀಡಿ ಜನರಿಗೆ ಸಕಾಲಕ್ಕೆ ಆರೋಗ್ಯ ಸಂಬಂಧಿ ಮಾಹಿತಿ ನೀಡಲು ಮುಂದಾಗಬೇಕು ಎಂದು ಡಾ. ನಾ.ಸೋಮೇಶ್ವರ ನುಡಿದರು.

‘ವೈದ್ಯರು: ವೈದ್ಯಕೀಯ ಸೇವೆ ಮತ್ತು ತಲ್ಲಣಗಳು’ ವಿಚಾರದಲ್ಲಿ ನಡೆದ ಪ್ರಥಮ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗೋಷ್ಠಿಯಲ್ಲಿ ಬಳ್ಳಾರಿಯ ಡಾ. ಯೋಗಾನಂದ ರೆಡ್ಡಿ, ಉಡುಪಿಯ ಡಾ. ಪಿ.ವಿ.ಭಂಡಾರಿ, ಮಂಗಳೂರಿನ ಡಾ.ಅಣ್ಣಯ್ಯ ಕುಲಾಲ್ ಎಂ., ಡಾ.ಕೆ.ಎಸ್.ಕಾರಂತ್ ವಿಚಾರ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News