ಎರ್ಮಾಳು ಬಡಾದಲ್ಲಿ ಕಸ ಡಂಪಿಂಗ್: ಗ್ರಾಮಸ್ಥರಿಂದ ವಿರೋಧ

Update: 2019-05-26 12:21 GMT

ಪಡುಬಿದ್ರಿ: ಬಡಾ ಉಚ್ಚಿಲ ಗ್ರಾಮ ಪಂಚಾಯಿತಿ ವಾಪ್ತಿಯಲ್ಲಿ ಎರ್ಮಾಳಿನಲ್ಲಿ ರಾತ್ರಿಯ ವೇಳೆ ಸುರಿಯುತ್ತಿರುವುದನ್ನು ಗ್ರಾಮಸ್ಥರು ತಡೆವೊಡ್ಡಿದ ಘಟನೆ ಶನಿವಾರ ರಾತ್ರಿ ನಡೆದಿದೆ.  

ಕಾಪು ಪುರಸಭೆಯ ಕಸವನ್ನು ಉಚ್ಚಿಲ ಗ್ರಾಮ ಪಂಚಾಯಿತಿಯ  ಎರ್ಮಾಳು ಬಡಾ ವಾರ್ಡ್ ಸಂಖ್ಯೆ 5 ರಲ್ಲಿ ಖಾಸಗಿಯವರಿಗೆ ಸೇರಿದ ಮರಳು ಗಣೆಗಾರಿಕೆ ನಡೆದ ಸ್ಥಳದಲ್ಲಿ ತಂದು ಗುತ್ತಿಗೆದಾರರೊಬ್ಬರು ಎರಡು ಟಿಪ್ಪರ್ ಲಾರಿಗಳಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದರು. ಇದನ್ನು ಕಂಡ ಗ್ರಾಮಸ್ಥರು ತ್ಯಾಜ್ಯ ಸುರಿಯುವುದಕ್ಕೆ ವಿರೋಧ ವ್ಯಕ್ತಪಡಿಸಿದರು. 

ನೀರಿನ ಒರೆತವಿರುವ ಈ ಜಮೀನಿನಲ್ಲಿ ನಿರ್ವಹಣೆ ಮಾಡದೇ ಘನತ್ಯಾಜ್ಯ ಸುರಿಯುವುದರಿಂದ ಈ ಭಾಗದಲ್ಲಿ ಸಮಸ್ಯೆ ಉಂಟಾಗಲಿದೆ. ಯಾವುದೇ ಕಾರಣಕ್ಕೂ ಇಲ್ಲಿ ಕಸ ಸುರಿಯಬೇಡಿ ಎಂದು ಒತ್ತಾಯಿಸಿದರು.

ಈ ವೇಳೆ ಗ್ರಾಮಸ್ಥರು ಹಾಗೂ ಗುತ್ತಿಗೆದಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವೇಳೇ ಗುತ್ತಿಗೆದಾರನು ಈ ತ್ಯಾಜ್ಯವನ್ನು ಪುರಸಭೆಯ ಮುಖ್ಯಾಧೀಕಾರಿ ಸೂಚನೆಯಂತೆ ತಂದು ಸುರಿಯುತ್ತಿರುವುದಾಗಿ ತಿಳಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. 

ಠಾಣೆಗೆ ಆಗಮಿಸಿದ ಗ್ರಾಮಸ್ಥರು ಈ ಬಗ್ಗೆ ದೂರು ನೀಡಿದ್ದು, ಸಿವಿಲ್ ವಿಷಯವಾಗಿರುವುದರಿಂದ ಗಂಭೀರವಾಗಿ ಪರಿಗಣಿಸದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ವಾಹನವನ್ನೂ ಬಿಡುಗಡೆ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News