ರಾಮಕೃಷ್ಣ ಮಿಷನ್‌ನಿಂದ 25ನೇ ಸ್ವಚ್ಛ ಮಂಗಳೂರು ಶ್ರಮದಾನ; ಕಡಲ ಕಿನಾರೆ ಸ್ವಚ್ಛತೆ

Update: 2019-05-26 13:10 GMT

ಮಂಗಳೂರು, ಮೇ 26: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಛ ಮಂಗಳೂರು ಶ್ರಮದಾನದ 5ನೇ ಹಂತದ 25ನೇ ವಾರದ ಶ್ರಮದಾನವನ್ನು ಮಂಗಳೂರು ನಗರದ ಹೊರವಲಯ ತಣ್ಣೀರುಬಾವಿ ಕಡಲ ಕಿನಾರೆ ಹಾಗೂ ಅದರ ಸುತ್ತಮುತ್ತ ಹಮ್ಮಿಕೊಳ್ಳಲಾಯಿತು.

ಒಎಂಪಿಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ನಾಯಕ್ ಹಾಗೂ ಯೂಥ್ ಸ್ಪೋರ್ಟ್ಸ್ ಕ್ಲಬ್ ತಣ್ಣೀರುಬಾವಿ ಅಧ್ಯಕ್ಷ ನವೀನ್ ಸುವರ್ಣ ತಣ್ಣೀರುಬಾವಿ ಕಡಲತೀರದಲ್ಲಿ ಶ್ರಮದಾನಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಎಸ್.ಎಸ್.ನಾಯಕ್ ಮಾತನಾಡಿದರು. ಈ ಸಂದರ್ಭ ಒಎಂಪಿಎಲ್ ಅಧಿಕಾರಿಗಳಾದ ಪಿ.ಪಿ. ಚೈನುಲು, ಕೇಶವ ಪಿ., ಮನಪಾ ಸ್ಥಳಿಯ ಸದಸ್ಯ ರಘುವೀರ್, ಸತ್ಯನಾರಾಯಣ್ ಕೆ.ವಿ., ಪ್ರಶಾಂತ ಉಬರಂಗಳ, ಮಲ್ಲಿಕಾರ್ಜುನ ಕೋಟಿವಾಲೆ, ಸುರೇಂದ್ರ ನಾಯಕ್, ಶ್ರೀಲತಾ ಯು.ಎ., ಶುಭಕರ ಶೆಟ್ಟಿ, ವೀಣಾ ಮಂಗಳಾ, ಶುಭಾ ಭಟ್, ಕಿರಣ ರೈ, ಪ್ರಶಾಂತ್ ಯಕ್ಕೂರು ಇನ್ನಿತರರು ಉಪಸ್ಥಿತರಿದ್ದರು. ಅಭಿಯಾನದ ಮಾರ್ಗದರ್ಶಿ ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿದರು.

ಕಡಲ ಕಿನಾರೆಯ ಸ್ವಚ್ಛತೆ: ಶ್ರಮದಾನಕ್ಕೆ ಚಾಲನೆ ದೊರಕಿದ ಬಳಿಕ ಸುಮಾರು 250 ಕಾರ್ಯಕರ್ತರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ನಿರ್ದೇಶನದಂತೆ ಕಡಲ ಕಿನಾರೆಯಲ್ಲಿ ಸ್ವಚ್ಛತೆಯನ್ನು ಕೈಗೊಂಡರು.

ಸ್ವಚ್ಛ ಮಂಗಳೂರು ಪರಿವಾರದ ಹಿರಿಯ ಸದಸ್ಯರಾದ ಮೋಹನ್ ಭಟ್, ವಿಠಲದಾಸ್ ಪ್ರಭು, ಕೋಡಂಗೆ ಬಾಲಕೃಷ್ಣ ನಾಕ್, ಪಿ.ಎನ್.ಭಟ್, ಕಮಲಾಕ್ಷ ಪೈ ಮಾರ್ಗದರ್ಶನದಲ್ಲಿ ಸಹ್ಯಾದ್ರಿ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಕೆಎಂಸಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿವೃಂದ ಕಡಲ ತೀರದಲ್ಲಿದ್ದ ಪ್ಲಾಸ್ಟಿಕ್, ಪೇಪರ್ ಹಾಗೂ ಕಸವನ್ನು ತೆಗೆದು ಸ್ವಚ್ಛಗೊಳಿಸಿದರು.

ಒಎಂಪಿಎಲ್ ಹಾಗೂ ಎಂಆರ್‌ಪಿಎಲ್‌ನಿಂದ ಅನೇಕ ಸಿಬ್ಬಂದಿ ಸಿಇಒ ಎಸ್.ಎಸ್. ನಾಯಕ್ ನೇತೃತ್ವದಲ್ಲಿ ಬೀಚ್‌ನಲ್ಲಿದ್ದ ತ್ಯಾಜ್ಯ ರಾಶಿಗಳನ್ನು ತೆಗೆದು ಟಿಪ್ಪರಿಗೆ ತುಂಬಿಸಿ ಸ್ವಚ್ಛಗೊಳಿಸಿದರು. ಶಿವು ಪುತ್ತೂರು, ಪುನೀತ್ ಪೂಜಾರಿ ಹಾಗೂ ಯುವ ಕಾರ್ಯಕರ್ತರು ತ್ಯಾಜ್ಯ ರಾಶಿಯಿಂದ ತುಂಬಿದ್ದ ಮೂರು ಸ್ಥಳಗಳನ್ನು ಹಲವಾರು ಕಾರ್ಯಕರ್ತರೊಂದಿಗೆ ಸೇರಿ ತ್ಯಾಜ್ಯ ತೆರವುಗೊಳಿಸಿ ಶುಚಿ ಮಾಡಿದರು. ಪ್ಲೋರಿಕ್ ಲೋಬೊ ನೇತೃತ್ವದಲ್ಲಿ ರೋಟರಿ ಕ್ಲಬ್ ಸದಸ್ಯರು ಶ್ರಮದಾನದಲ್ಲಿ ಸಹಕರಿಸಿದರು. ಸುಭೋದಯ ಆಳ್ವ ಶ್ರಮದಾನದ ಉಸ್ತುವಾರಿ ವಹಿಸಿದ್ದರು.

ಐದು ಲೋಡ್‌ಗಳಷ್ಟು ತ್ಯಾಜ್ಯ ತೆರವು: ಒಂದೆಡೆ ಕಡಲ ತೀರದಲ್ಲಿ ಸ್ವಚ್ಛತೆ ನಡೆಯುತ್ತಿದ್ದರೆ ಮತ್ತೊಂದೆಡೆ ಅಭಿಯಾನದ ಪ್ರಮುಖ ದಿಲ್‌ರಾಜ್ ಆಳ್ವ ನೇತೃತ್ವದಲ್ಲಿ ಬೀಚ್‌ಗೆ ಬರುವ ಪ್ರಮುಖ ರಸ್ತೆಗಳ ಬದಿಗಳಲ್ಲಿ ಅನೇಕ ದಿನಗಳಿಂದ ಬಿದ್ದುಕೊಂಡಿದ್ದ ತ್ಯಾಜ್ಯ ಸಹಿತ ಕಲ್ಲು ಮಣ್ಣುಗಳ ರಾಶಿಯನ್ನು ಜೆಸಿಬಿ ಸಹಾಯ ಪಡೆದುಕೊಂಡು ಸ್ವಚ್ಛ ಮಾಡಲಾಯಿತು.

ಸತೀಶ್ ಕೆಂಕನಾಜೆ, ರವಿ ಕೆ.ಆರ್., ವಿಜಯ್ ಶೆಟ್ಟಿ, ವಿಖ್ಯಾತ್ ಮತ್ತಿತರರು ಕಸ ತೆರವು ಮಾಡಲು ನೆರವಾದರು. ಕಡಲತೀರ ಹಾಗೂ ರಸ್ತೆಯ ಬದಿಗಳನ್ನು ಈ ವಾರದ ಶ್ರಮದಾನದಲ್ಲಿ ಸ್ವಚ್ಛಮಾಡಿ ಒಟ್ಟು ಸುಮಾರು ಐದು ಲೋಡ್‌ಗಳಷ್ಟು ತ್ಯಾಜ್ಯವನ್ನು ಹೆಕ್ಕಿ ತೆಗೆದು ಟಿಪ್ಪರಿಗೆ ಹಾಕಿ ತಣ್ಣೀರುಬಾವಿ ಪರಿಸರವನ್ನು ಶುದ್ಧಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News