ದಲಿತರು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕಾಗಿದೆ: ಡಾ.ವಾಸುದೇವ ಬೆಳ್ಳೆ

Update: 2019-05-26 13:55 GMT

ಮಂಗಳೂರು,ಮೇ.26:ದಲಿತರು ತಮ್ಮ ಸಂಸ್ಕೃತಿಯ ನಿಜರೂಪವನ್ನು ಅರಿತುಕೊಳ್ಳುವ ಮೂಲಕ ತಮ್ಮ ಆಸ್ಮಿತೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಚಿಂತಕ ಡಾ. ವಾಸುದೇವ ಬೆಳ್ಳೆ ತಿಳಿಸಿದ್ದಾರೆ.

ನಗರದ ನಂತೂರು ಶಾಂತಿಕಿರಣ ಡಾ.ಕೃಷ್ಣಪ್ಪ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಪರಿವರ್ತನವಾದ)ವತಿಯಿಂದ ಹಮ್ಮಿಕೊಂಡ ಅಧ್ಯಯನ ಶಿಬಿರದಲ್ಲಿ ದಲಿತ ಚಳವಳಿಗಳು ನಡೆದು ಬಂದ ಹಾದಿ ಹಾಗೂ ವರ್ತಮಾನದ ಸವಾಲುಗಳು ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ದಲಿತರು ತಮ್ಮ ಹಿರಿಯರಿಂದ ಬಂದ ಶ್ರೀಮಂತವಾದ ದಲಿತ ಸಂಸ್ಕೃತಿಯ ಬಗ್ಗೆ ವಿಸ್ಮತಿಗೆ ಒಳಗಾಗಿರುವ ಪರಿಣಾಮವಾಗಿ ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ವರ್ಗದಲ್ಲಿ ಸುಶಿಕ್ಷಿತ ದಲಿತ ವರ್ಗದವರು ಹೆಚ್ಚಿದ್ದಾರೆ. ಇದರಿಂದ ದಲಿತರು ಮಾನಸಿಕ ದಿವಾಳಿತನದ ಸ್ಥಿತಿಗೆ ತಲುಪಿದ್ದಾರೆ. ಜೊತೆಗೆ ತಾವೇ ಅವಮಾನಕ್ಕೆ ತುತ್ತಾಗುವ ಘಟನೆಗಳು ನಡೆಯುತ್ತಿದೆ. ದಲಿತ ಚಳವಳಿಗಳು ಬಲಗೊಳ್ಳಬೇಕಾದರೆ ಈ ರೀತಿಯ ಮಾನಸಿಕ ಗುಲಾಮ ಗಿರಿಯಿಂದ ದಲಿತರು ಮೊದಲು ಹೊರಬರಬೇಕಾದ ಅಗತ್ಯವಿದೆ, ಈ ಬಗ್ಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಈ ಹಿಂದೆಯೇ ನಮ್ಮನ್ನು ಎಚ್ಚರಿಸಿದ್ದಾರೆ. ಮನುಷ್ಯನನ್ನು ಪ್ರೀತಿಸುವ, ಪರಸ್ಪರ ಗೌರವಿಸುವ ಬುದ್ಧನ ಚಿಂತನೆಗೆ ಸರಿಸಮಾನವಾದ ಸಂಸ್ಕೃತಿ, ಆಧ್ಯಾತ್ಮಿಕತೆ ಸಾಕಷ್ಟು ದಲಿತರ ಸಂಸ್ಕೃತಿಯಲ್ಲಿದೆ ಅದನ್ನು ನೆನಪಿಸಿಕೊಳ್ಳ ಬೇಕಾಗಿದೆ ಮತ್ತು ಆ ಹಾದಿಯಲ್ಲಿ ಸಾಗಬೇಕಾಗಿದೆ ಎಂದು ವಾಸುದೇವ ಬೆಳ್ಳೆ ತಿಳಿಸಿದ್ದಾರೆ.

ಬುದ್ಧ ಮನುಷ್ಯನನ್ನು ಕೇಂದ್ರೀಕರಿಸಿದ ಚಿಂತನೆಯ ಮೂಲಕ ದಲಿತ ಚಳವಳಿಗೆ ಹೊಸ ದಿಕ್ಕನ್ನು ತೋರಿಸಿದರೆ, ಭಕ್ತಿ ಚಳವಳಿಗಳು ಮಡಿ ಮೈಲಿಗೆಯ ಹೆಸರಿನಲ್ಲಿ ಮನುಷ್ಯರನ್ನು ಮೇಲು ಕೀಳು ಎಂದು ಕಾಣುವುದು ತಪ್ಪು ಎಂದು ತೋರಿಸಿತು, ಅಂಬೇಡ್ಕರ್ ದಲಿತರಿಗೆ ಮಾನಸಿಕ ಮತ್ತು ವೈಜ್ಞಾನಿಕವಾದ ನೆಲೆಯ ಚಿಂತನೆಯ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲಕ ದಲಿತರ ಸಶಕ್ತತೆಗೆ ಒತ್ತು ನೀಡಿದ್ದಾರೆ. ಮನುಷ್ಯನನ್ನು ಆತನ ಹುಟ್ಟಿನ ಮೂಲಕ ಜಾತಿವ್ಯವಸ್ಥೆಯ ಮೂಲಕ ನೋಡುವ ಬದಲು ಆತನ ಸಾಮರ್ಥ್ಯದ ನೆಲೆಯಲ್ಲಿ ಆತನ ಪ್ರತಿಭೆಗೆ ಸ್ಥಾನ ನೀಡುವಂತಾಗಬೇಕು ಎಂದರು.

ಅಂಬೇಡ್ಕರ್ ಹೇಳಿದಂತೆ ಜಾತಿ ಎನ್ನುವುದು ಒಂದು ಮನೋಸ್ಥಿತಿ ಅದು ಮನುಷ್ಯರಲ್ಲಿ ಅಸಮಾನತೆಯನ್ನು ಸೃಷ್ಟಿಸಿದೆ.ಮನುಷ್ಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಯಾವ ರೀತಿ ಮೇಲು ಕೀಳು ಎನ್ನುವುದನ್ನು ಸೃಷ್ಟಿಸಿದೆ ಎನ್ನುವ ಹುನ್ನಾರವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಚಿಂತನೆಯ ಮೂಲಕ ಬಯಲಿಗೆಳೆದು ದಲಿತರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಸಂವಿಧಾನ ಮೂಲಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ ಸಭೆಗಳ ಒಳಗೆ ದಲಿತರಿಗೆ ನ್ಯಾಯ ದೊರಕಿಸಿಕೊಡುವ ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಆದರೆ ಆ ಪ್ರಜಾತಂತ್ರ ವ್ಯವಸ್ಥೆಯೆ ದುರ್ಬಲಗೊಂಡರೆ, ಆ ವ್ಯವಸ್ಥೆಗೆ ಸೋಲಾದರೆ ದಲಿತ ಚಳವಳಿಗೆ ಹಿನ್ನಡೆಗೆಯಾದಂತೆ ಎಂದು ನಾವು ಭಾವಿಸಬೇಕಾಗಿದೆ. ದಲಿತ ಚಳವಳಿ ಕೇವಲ ಮೀಸಲಾತಿಗೆ ಹುಟ್ಟಿಕೊಂಡ ಚಳವಳಿಯಲ್ಲ ಮನುಷ್ಯರ ನಡುವಿನ ಪರಸ್ಪರ ಗೌರವ ಧಾರ್ಮಿಕ ಆಧ್ಯಾತ್ಮ ಕತೆಯನ್ನು ಒಳಗೊಂಡ ಮಾನಸಿಕತೆಯನ್ನು ಒಳಗೊಂಡ ಚಳವಳಿಯೂ ಆಗಿದೆ. ದಲಿತ ಪದಕ್ಕಿಂತಲೂ ಬಹುಜನ ಪದ ಈ ಚಳವಳಿಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಎಂದು ವಾಸುದೇವ ಬೆಳ್ಳೆ ತಿಳಿಸಿದ್ದಾರೆ.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಹ ಸಂಚಾಲಕ ರಮೇಶ್ ಕೊಟ್ಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಶೋಕ್ ಕೊಂಚಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News