ಯಕ್ಷಗಾನ ಕಲಾವಿದರಿಗೆ ‘ರಾಮದಾಸ ಸಾಮಗ ಪ್ರಶಸ್ತಿ’ ಪ್ರದಾನ

Update: 2019-05-26 14:22 GMT

ಉಡುಪಿ, ಮೇ 26: ಪರ್ಯಾಯ ಪಲಿಮಾರು ಮಠ, ಉಡುಪಿ ಯಕ್ಷಗಾನ ಕಲಾರಂಗ ಹಾಗೂ ಕೋಟೇಶ್ವರ ಸಂಯಮಂ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾದ ಎಂ. ಆರ್.ವಾಸುದೇವ ಸಾಮಗ -70ರ ಸಮಾರಂಭ ‘ಸಾಮಗ ಸಪ್ತತಿ’ ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಕಂದಾವರ ರಘು ರಾಮ ಶೆಟ್ಟಿ ಮತ್ತು ಬೋಳಾರ ಸುಬ್ಬಯ್ಯ ಶೆಟ್ಟಿ ಅವರಿಗೆ ಪಲಿಮಾರು ಸ್ವಾಮೀಜಿ ‘ರಾಮದಾಸ ಸಾಮಗ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು.

ಮಲ್ಪೆ ರಾಮದಾಸ ಸಾಮಗ ಸಂಸ್ಮರಣಾ ಭಾಷಣ ಮಾಡಿದ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ. ಎಲ್.ಸಾಮಗ, ಯಕ್ಷಗಾನ ಕಲಾವಿದರು ಕನ್ನಡ ಭಾಷೆಯನ್ನು ಉತ್ತಮವಾಗಿ ಮಾತನಾಡಲು ಸಂಭಾಷಣೆಗಳಲ್ಲಿರುವ ಶುದ್ಧ ಕನ್ನಡವೇ ಕಾರಣ. ಭಾಷೆ ಸ್ವಚ್ಛಗೊಳಿಸುವ ಕಾರ್ಯ ಸಾಹಿತಿ ಮತ್ತು ಕಲಾವಿದರಿಂದ ನಡೆಯುತ್ತಿದೆ. ಮಲ್ಪೆ ರಾಮದಾಸ ಸಾಮಗ ಕನ್ನಡ ಭಾಷೆಗೆ ನೀಡಿದ ಕೊಡುಗೆಯನ್ನು  ಸ್ಮರಿಸಬೇಕು ಎಂದು ಹೇಳಿದರು.

ಬಹುಮೇಳಗಳ ಯಜಮಾನ ಪಿ.ಕಿಶನ್ ಹೆಗ್ಡೆ ಮಾತನಾಡಿ, ಯಕ್ಷಗಾನ ಕ್ಷೇತ್ರ ದಲ್ಲಿ ಗುರು-ಶಿಷ್ಯ ಪರಂಪರೆ ಮುಂದುವರಿಯಬೇಕು. ಜಿಲ್ಲೆಯಲ್ಲಿ 45 ಮೇಳ ಗಳು ಇರುವುದರಿಂದ ಹೆಚ್ಚಿನ ಕಲಾವಿದರ ಅವಶ್ಯಕತೆ ಇದೆ. ಇದರಿಂದ ಕಲಾವಿದರ ಕೊರತೆಯೂ ನೀಗಲಿದೆ ಎಂದು ತಿಳಿಸಿದರು.

ಯಕ್ಷಗಾನ ಅಕಾಡೆಮಿ ಸದಸ್ಯ ರಾಜಶೇಖರ್ ಹೆಬ್ಬಾರ್ ಐರೋಡಿ, ಯಕ್ಷಗಾನ ಕಲಾರಂಗ ಅಧ್ಯಕ್ಷ ಕೆ.ಗಣೇಶ್ ರಾವ್, ಉಪಾದ್ಯಕ್ಷ ಎಸ್.ವಿ. ಭಟ್, ಕಾರ್ಯದರ್ಶಿ ಮುರಳಿ ಕಡೇಕಾರ್ ಉಪಸ್ಥಿತರಿದ್ದರು.ಬಳಿಕ ವಾಸುದೇವ ಸಾಮಗರ ಕಲಾಸಾಧನೆಯ ವಿವಿಧ ಮುಖಗಳ ಅನಾವರಣ ಗೋಷ್ಠಿಯು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News