ಡಾ.ಕಾರಂತರ ಬಾಲವನ ಬೇಸಿಗೆ ಶಿಬಿರ ಸಮಾರೋಪ

Update: 2019-05-26 14:33 GMT

ಪುತ್ತೂರು: ಜೀವನದಲ್ಲಿ ನಮ್ಮನ್ನು ನಾವು ಪ್ರೀತಿಸಬೇಕು ಹಾಗೂ ಗೌರವಿಸಬೇಕು. ಆಗ ನಮ್ಮ ಜೀವನದಲ್ಲಿ  ಸೋಲದೆ ಜಯವನ್ನು ಸಾಧಿಸುತ್ತೇವೆ ಹಾಗೂ ನಮ್ಮ ಜೀವನದಲ್ಲಿ ಜಯ ಸಿಕ್ಕಾಗ ಸಂತೋಷ ಹಾಗೂ ನೆಮ್ಮದಿ ತಾನಾಗಿಯೇ ಸಿಗುತ್ತದೆ ಎಂದು ಪುತ್ತೂರು ಸಹಾಯಕ ಕಮಿಷನರ್ ಹೆಚ್.ಕೆ. ಕೃಷ್ಣಮೂರ್ತಿ ಹೇಳಿದರು.

ಅವರು ಶನಿವಾರ ಸಂಜೆ ಡಾ. ಶಿವರಾಮ ಕಾರಂತ ಬಾಲವನದಲ್ಲಿ ಪುತ್ತೂರು ಡಾ. ಶಿವರಾಮ ಕಾರಂತ ಬಾಲವನ ಅಭಿವೃದ್ಧಿ ಸಮಿತಿ ಹಾಗೂ ಪುತ್ತೂರು ಸಹಾಯಕ ಆಯಕ್ತರ ಆಶ್ರಯದಲ್ಲಿ ನಡೆದ `ಬಾಲವನ ರಂಗಾಚಿತ್ತಾರ-2019' ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಮಕ್ಕಳು ಬೇಸಿಗೆ ರಜಾ ಕಾಲದಲ್ಲಿ ಸುಮ್ಮನೆ ಕಾಲಹರಣ ಮಾಡುವುದು ಬಿಟ್ಟು ಇಂತಹ ಅರ್ಥಪೂರ್ಣವಾದ ಶಿಬಿರದಲ್ಲಿ ಭಾಗವಹಿಸಬೇಕು. ಆಗ ಅವರಲ್ಲಿ ಕ್ರಿಯಾಶೀಲತೆಯು ಹೆಚ್ಚುತ್ತದೆ. ಅಲ್ಲದೆ ಚಟುವಟಿಕೆಗಳಲ್ಲಿಯೂ ಕೂಡಾ ಆಸಕ್ತಿಯನ್ನು ಹೊಂದುತ್ತಾರೆ. ಇಂತಹ ಶಿಬಿರದಲ್ಲಿ ಭಾಗವಹಿಸುವುದರಿಂದ, ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ದೊರೆಯುತ್ತದೆ. ಅಲ್ಲದೇ ಮುಂದಿನ ದಿನಗಳಲ್ಲಿ ಮಕ್ಕಳೆಲ್ಲರೂ ಬೆಳೆಯುವಾಗ ತನ್ನ ತನವನ್ನು ಗುರುತಿಸಿಕೊಳ್ಳುವಂತಹ ಕೆಲಸವನ್ನು ಮಾಡುವುದಕ್ಕೆ ಸಹಾಯವಾಗುತ್ತದೆ ಎಂದರು.

ಸಮಾರೋಪ ಭಾಷಣ ಮಾಡಿದ ದ.ಕ.ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿಯಾದ ವಾರ್ತಾಭಾರತಿ ಪತ್ರಿಕೆಯ ಮಂಗಳೂರು ಬ್ಯೂರೋ ಬಿ.ಎನ್. ಪುಷ್ಪರಾಜ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಅಂತಃ ಸತ್ವಗಳಿದ್ದು,  ಅದನ್ನು ಹೊರ ತರಲು ಇಂತಹ ಶಿಬಿರಗಳ ಅಗತ್ಯವಿದೆ. ಮಕ್ಕಳು ಇಂತಹ ಶಿಬಿರಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕಾಗ ಅದನ್ನು ಉಪಯೋಗಿಸಬೇಕು. ಇಂತಹ ಶಿಬಿರಗಳು ಮಕ್ಕಳ ಮುಂದಿನ ಜೀವನಕ್ಕೆ ಸಹಾಯವಾಗಲಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ ಡಾ. ಶಿವರಾಮ ಕಾರಂತರ ಪರಿಸರ ಪ್ರೀತಿಯನ್ನು ಹೊಂದಿದವರಾಗಿದ್ದು ಅವರ ಬಾಲವನದಲ್ಲಿ ನಿರಂತರ ಮಕ್ಕಳಿಗೆ ಪರಿಸರ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಕ್ಕಳಿಗೆ ಪರಿಸರಕ್ಕೆ ಪೂರಕವಾಗಿರುವ ಚಲನ ಚಿತ್ರವನ್ನು ಬಾಲವನದಲ್ಲಿ ಮಿನಿ ಥಿಯೇಟರ್ ಮೂಲಕ ನೀಡುವ ವ್ಯವಸ್ಥೆ ಮಾಡುವುದರಿಂದ ಅವರಿಗೆ ಪರಿಸರ ಕಾಳಜಿ ಮೂಡಲು ಸಹಕಾರಿಯಾಗುತ್ತದೆ ಎಂದರು. 

ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶಪಾಲ ಡಾ. ಮಾಧವ ಭಟ್ ಮಾತನಾಡಿ ಶುಭಹಾರೈಸಿದರು.

ಈ ಸಂದರ್ಭ ವಿದ್ಯಾರ್ಥಿ ಶಿಕ್ಷಕರಾದ ಉದಯ್ ಸಾರಂಗ್, ಮೋಹನ್ ಶೇಣಿ, ಜಯಪ್ರಕಾಶ್ ಶೆಟ್ಟಿ, ಅಕ್ಷತಾ, ನವೀನ್, ರೇಷ್ಮಾ, ಆಶಾಲತಾ, ಧನುಷಾ ಅವರಿಗೆ ಶಾಲು ಹೊದಿಸಿ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. 

ಶಿಬಿರ ನಿರ್ದೇಶಕ ಕೃಷ್ಣಪ್ಪ ಬಂಬಿಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸಾರ ರಂತ ತಂಡದ ನಿರ್ದೇಶಕರಾದ ಪತ್ರಕರ್ತ ಸಂಶುದ್ಧೀನ್ ಸಂಪ್ಯ ಸ್ವಾಗತಿಸಿದರು.  ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ನಯನಾ ರೈ ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

ಸಮಾರೋಪ ಸಮಾರಂಭದ ಬಳಿಕ ಶಿಬಿರದ ಮಕ್ಕಳಿಂದ ಡಾ. ಶಿವರಾಮ ಕಾರಂತರು ಬರೆದ `ಸಿಹಿ ಮೂಲಂಗಿ' ನಾಟಕ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News