ಹೋರಾಟವಿಲ್ಲದೆ ಕಾರ್ಮಿಕರ ಬದುಕು ಬದಲಾಗಲ್ಲ: ಬಾಲಕೃಷ್ಣ ಶೆಟ್ಟಿ

Update: 2019-05-26 15:04 GMT

ಕುಂದಾಪುರ, ಮೇ 26: ಸ್ವಾತಂತ್ರ್ಯ ಪೂರ್ವದಲ್ಲೇ ಜನ್ಮ ತಳೆದ ಕಾರ್ಮಿಕ ಚಳವಳಿಯು ಸ್ವಾತಂತ್ರ್ಯ ಹೋರಾಟದಲ್ಲಿ ಸಮರಧೀರ ಪಾತ್ರವಹಿಸಿದೆ. ಲಾಲ ಲಜಪತ್ ರಾಯ್, ಬಾಲಗಂಗಾಧರ ತಿಲಕ್‌ರಂತಹ ಹೋರಾಟಗಾರರನ್ನು ಬ್ರಿಟೀಷರು ಬಂಧಿಸಿದಾಗ ಬೃಹತ್ ಮುಷ್ಕರ ದಾಖಲಿಸಿದ ಕೀರ್ತಿ ಕಾರ್ಮಿಕ ವರ್ಗಕ್ಕೆ ಸಲ್ಲುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಾರ್ಮಿಕರು ವಹಿಸಿದ ಪಾತ್ರ ಇತಿಹಾಸದಲ್ಲಿ ಮರೆಯಲು ಅಸಾಧ್ಯ ಎಂದು ಸಿಐಟಿಯು ರಾಜ್ಯ ಮುಖಂಡ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.

ಕುಂದಾಪುರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಆಶ್ರಯದಲ್ಲಿ ರವಿವಾರ ಕುಂದಾಪುರ ಹಂಚು ಕಾರ್ಮಿಕ ಭವನದಲ್ಲಿ ಜರಗಿದ ದೇಶದ ಕಾರ್ಮಿಕ ಚಳವಳಿಗೆ ಶತಮಾನೋತ್ಸವ ಸಿಐಟಿಯು ಸುವರ್ಣ ಮಹೋತ್ಸವದ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಆಳುವ ಸರಕಾರಗಳು ದೇಶದಲ್ಲಿ ನಿರಂತರವಾಗಿ ಬದಲಾಗುತ್ತಿರುತ್ತದೆ. ಆದರೆ ಕಾರ್ಮಿಕರ ಬದುಕು ಹೋರಾಟವಿಲ್ಲದೇ ಬದಲಾಗಲು ಸಾಧ್ಯವಿಲ್ಲ. ಕಾರ್ಮಿಕ ವರ್ಗಕ್ಕೆ ಅಲ್ಪಪ್ರಮಾಣದ ಕಾನೂನುಗಳು ಇಂತಹ ಹೋರಾಟ ಗಳಿಂದಲೇ ಗಳಿಸಿಕೊಂಡಿದೆ ಎಂದರು.

ಕಾರ್ಮಿಕ ಸಂಘಟನೆಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಈ ಐವತ್ತು ವರ್ಷಗಳಲ್ಲಿ ಐಕ್ಯ ಹೋರಾಟಗಳನ್ನು ನಡೆಸಿ ಇದುವರೆಗೂ 18 ಮಹಾ ಮುಷ್ಕರಗಳನ್ನು ಸಂಘಟಿಸಿ ಕಾರ್ಮಿಕ ಪರ ನೀತಿಗಳಿಗೆ ಒತ್ತಾಯಿಸಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಬಿಎಂಎಸ್ ಕಾರ್ಮಿಕ ಸಂಘಟನೆಯನ್ನು ಐಕ್ಯ ಚಳವಳಿಯಿಂದ ದೂರ ಸರಿಯು ವಂತೆ ಮಾಡಿರುವುದು ಕಾರ್ಮಿಕ ವರ್ಗಕ್ಕೆ ಮಾಡಿದ ದ್ರೋಹವಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಕಾರ್ಮಿಕ ವರ್ಗದ ಮೇಲೆ ದಮನಕಾರಿ ನೀತಿಗಳನ್ನು ಮತ್ತಷ್ಟು ವೇಗವಾಗಿ ತರಲು ಹೊಂಚು ಹಾಕಿದೆ. ಕಟ್ಟಡ ಕಾರ್ಮಿಕರ ಸೆಸ್ ಹಣ 7500 ಕೋಟಿ ರೂ.ವನ್ನು ರಾಜ್ಯ ಕಲ್ಯಾಣ ಮಂಡಳಿಯಿಂದ ಕೇಂದ್ರ ಸರಕಾರ ವಶಪಡಿಸಿಕೊಳ್ಳುವ ಹುನ್ನಾರ ನಡೆಸಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ನೀತಿ ವಿರುದ್ಧ ಕಟ್ಟಡ ಕಾರ್ಮಿಕರು ಐಕ್ಯತೆಯಿಂದ ಹೋರಾಟ ನಡೆಸಬೇಕೆಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕೆಲವು ಮಾಲಿಕರು ಕಟ್ಟಡ ಕಾರ್ಮಿಕರನ್ನು ಸರಕು ಸಾಗಾಟ ವಾಹನಗಳಲ್ಲಿ ಸಾಗಿಸುತ್ತಿರುವುದನ್ನು ವಿರೋಧಿಸಿ ನಿರ್ಣಯ ತೆಗೆದು ಕೊಳ್ಳಲಾಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಯು.ದಾಸಭಂಡಾರಿ ವಹಿಸಿದ್ದರು.

ಸಂಘದ ಕೋಶಾಧಿಕಾರಿ ಜಗದೀಶ ಆಚಾರ್ ಹೆಮ್ಮಾಡಿ, ಮುಖಂಡರಾದ ಚಿಕ್ಕ ಮೊಗವೀರ, ಅರುಣ್ ಕುಮಾರ್ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಹೆಮ್ಮಾಡಿ ಸ್ವಾಗತಿಸಿದರು. ರಮೇಶ್ ಗುಲ್ವಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News